ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ: ರಾಜ್ಯದಲ್ಲಿ ಇನ್ನೂ 5 ದಿನ ಮಳೆಯಾಗುವ ಸಾಧ್ಯತೆ!

ಬೆಂಗಳೂರು: ಬಿಸಿಲಿನಿಂದ ಕಂಗೆಟ್ಟಿದ್ದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಬುಧವಾರ) ಸಂಜೆ ಮಳೆ ತಂಪೆರೆದಿದೆ. ಬೆಂಗಳೂರು ಹಲವು ಕಡೆ ಸಂಜೆ 5 ಗಂಟೆ ಸುಮಾರಿಗೆ ಬಿರುಗಾಳಿ ಸಮೇತ ಆರಂಭವಾದ ಜೋರಾದ ಮಳೆಯಿಂದ ಕೆಲವೆಡೆ ಟ್ರಾಫಿಕ್ ಜಾಮ್ ಸಂಕಷ್ಟ ಕೂಡ ಉಂಟಾಗಿದೆ.

ಮುಂದಿನ 48 ಗಂಟೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಘೋಷಿಸುತ್ತಿದ್ದಂತೆ ನಗರದಲ್ಲಿ ಮಳೆ ಸುರಿಯಲಾರಂಭಿಸಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ತಾಪಮಾನವು ಸಾಮಾನ್ಯ ಸ್ಥಿತಿಗೆ ಮರಳಿದ್ದು, ವಾತಾವರಣ ಕೂಲ್ ಆಗಿದೆ.

ನಗರದ ಶಾಂತಿ ನಗರ, ಎಂ.ಜಿ ರಸ್ತೆ, ಕೆ.ಆರ್​ ಮಾರ್ಕೆಟ್, ಕಾರ್ಪೊರೇಷನ್ ಸರ್ಕಲ್, ಗುಟ್ಟಹಳ್ಳಿ, ವಿಧಾನಸೌಧ ಯಲಹಂಕ, ರಿಚ್​ಮಂಡ್​ಟೌನ್ ಸುತ್ತಮುತ್ತ ಹಾಗೂ ನೆಲಮಂಗಲ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ಮೆಜೆಸ್ಟಿಕ್, ಕೆ.ಆರ್ ಸರ್ಕಲ್, ಕೆ.ಆರ್.ಪುರಂ, ರಾಮಮೂರ್ತಿ ನಗರ ಸುತ್ತಮುತ್ತ ಮಳೆಯಾಗುತ್ತಿದ್ದು, ಸಂಚಾರ ದಟ್ಟನೆ ಉಂಟಾಗಿದೆ ಉಂಟಾಗಿದೆ. ಕೆಲಸ ಮುಗಿಸಿ ಮನೆ ಕಡೆ ಹೊರಟ ವಾಹನ ಸವಾರರು ಪರದಾಡುತ್ತಿದ್ದಾರೆ.
ನೆಟಿಜನ್‌ಗಳು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿರುವ ವಿಡಿಯೋಗಳನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಸುರಿದ ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತು, ಜನಸಂಚಾರ ಅಸ್ತವ್ಯಸ್ತವಾಗಿದೆ. ಹಲವೆಡೆ ಮಳೆಯಿಂದಾಗಿ ಟ್ರಾಫಿಕ್​ ಜಾಮ್​ ಉಂಟಾಗಿ ಸವಾರರು ಪರದಾಡುತ್ತಿದ್ದಾರೆ. ಮಳೆಯಿಂದಾಗಿ ರಸ್ತೆಗಳು ಜಾಲಾವೃತಗೊಂಡಿದ್ದು, ಬೈಕ್ ಸವಾರರು ನೀರು ತುಂಬಿದ ರಸ್ತೆಗಳಲ್ಲಿ ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ. ಸಂಜೆಯ ಮಳೆಯಿಂದಾಗಿ ದ್ವಿಚಕ್ರ ವಾಹನ ಸಾವರಿಗೆ ಸಮಸ್ಯೆಯಾಗಿದ್ದು, ಗಾಳಿ ಸಹಿತ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ಹರಿಯುತ್ತಿದೆ.

Latest Indian news

Popular Stories