ಸಿದ್ದರಾಮಯ್ಯರಲ್ಲಿ ರಾಮನ ಹೆಸರಿದೆ, ರಾವಣನ ಗುಣವಿದೆ – ನಳಿನ್ ಕುಮಾರ್ ಕಟೀಲ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಶ್ರೀರಾಮ, ಮತ್ತೆ ಯಾಕೆ ಅಲ್ಲಿಗೆ ಹೋಗಿ ಶ್ರೀರಾಮನನ್ನು ಪೂಜಿಸಬೇಕು ಎನ್ನುವ ಮಾಜಿ ಸಚಿವ ಹೆಚ್.ಆಂಜನೇಯ ಹೇಳಿಕೆಗೆ ಸಂಸದ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದು, ಹೆಸರಿಟ್ಟ ತಕ್ಷಣ ಎಲ್ಲರೂ ರಾಮನಾಗಲು ಸಾಧ್ಯವಿಲ್ಲ ಎಂದಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಎನ್ನುವುದು ಭಾವನಾತ್ಮಕ ನಂಬಿಕೆಗಳ ಸಂಕೇತ. ಮರ್ಯಾದ ಪುರುಷ ರಾಮನನ್ನು ಆದರ್ಶ ಪುರುಷನಾಗಿ ಸ್ವೀಕರಿಸಲಾಗಿದೆ. ರಾಮನಿಗೆ ಇನ್ನೊಂದು ಹೋಲಿಕೆ ಇಲ್ಲ. ರಾಮನಿಗೆ ರಾಮನೇ ಹೋಲಿಕೆ. ಹೆಸರಿಟ್ಟ ತಕ್ಷಣ ಎಲ್ಲರೂ ರಾಮನಾಗಲು ಸಾಧ್ಯವಿಲ್ಲ. ಸಿದ್ದರಾಮಯ್ಯರಲ್ಲಿ ರಾಮನ ಹೆಸರಿದೆ, ರಾವಣನ ಗುಣವಿದೆ ಎಂದರು. ರಾಜ್ಯದಲ್ಲಿ ಗೋದ್ರಾ ಮಾದರಿಯ ಹತ್ಯಾಕಾಂಡಕ್ಕೆ ಸಂಚು, ಅಯೋಧ್ಯೆಗೆ ಹೋಗುವವರಿಗೆ ಭದ್ರತೆ ಕೊಡಬೇಕೆಂದು ಹೇಳಿಕೆ ನೀಡಿರುವ ಬಿ.ಕೆ.ಹರಿಪ್ರಸಾದ್ ಅವರ ಮೇಲೆ ಕಿಡಿಕಾರಿದ ಸಂಸದ ನಳಿನ್ ಕುಮಾರ್ ಕಟೀಲ್, ತಕ್ಷಣ ಹರಿಪ್ರಸಾದ್ ಬಂಧನವಾಗಲಿ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ

ಸಿದ್ದರಾಮಯ್ಯ ಅವರು ವಿತಂಡ ವಾದ ಮಾಡುವುದರಲ್ಲಿ ನಿಸ್ಸೀಮರು: ಮಾಜಿ ಸಿಎಂ ಹೇಳಿದ್ದೇನು? ಈ ಬಗ್ಗೆ ಸಿಎಂ, ಗೃಹಸಚಿವರು, ಉಪ ಮುಖ್ಯಮಂತ್ರಿಗಳು ತಮಗೇನು ಗೊತ್ತಿಲ್ಲ ಎನ್ನುತ್ತಿದ್ದಾರೆ. ಬಿ.ಕೆ ಹರಿಪ್ರಸಾದ್ ತಮ್ಮಲ್ಲಿರುವ ಮಾಹಿತಿಯನ್ನು ಗೃಹ ಇಲಾಖೆಗೆ ನೀಡಲಿ. ಇಲ್ಲದಿದ್ದಲ್ಲಿ ತಕ್ಷಣ ಅವರ ಬಂಧನವಾಗಲಿ. ಏಕೆಂದರೆ ಗೋದ್ರಾ ಘಟನೆಯ ಹಿಂದೆ ಕಾಂಗ್ರೆಸ್ ಇತ್ತು. ಮೋದಿ ಸರ್ಕಾರವನ್ನು ಬೀಳಿಸಬೇಕು ಎನ್ನುವ ಕುತಂತ್ರವನ್ನು ಆಗ ಕಾಂಗ್ರೆಸ್ ಮಾಡಿತ್ತು. ಇಂದು ಮತ್ತೆ ಈ ಹೇಳಿಕೆಯನ್ನು ಹರಿಪ್ರಸಾದ್ ಹೇಳಿದ್ದಾರೆಂದರೆ ಈ ಷಡ್ಯಂತ್ರವನ್ನು ಕಾಂಗ್ರೆಸ್ ಮಾಡಿತ್ತು ಎಂದು ಆರೋಪಿಸುತ್ತೇನೆ ಎಂದರು.

Latest Indian news

Popular Stories