ಬೆಂಗಳೂರು: ಬಿಸಿಲಿನ ಧಗೆಯಿಂದ ಕಂಗೆಟ್ಟಿದ್ದ ರಾಜಧಾನಿ ಬೆಂಗಳೂರಿನ ಹಲವು ಕಡೆ ಗುರುವಾರ ರಾತ್ರಿ ಗುಡುಗು ಸಹಿ ಧಾರಾಕಾರ ಮಳೆಯಾಗಿದ್ದು, ಕಚೇರಿಯಿಂದ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರಿನ ಶಾಂತಿನಗರ, ಕಲಾಸಿಪಾಳ್ಯ, ಸಿಟಿ ಮಾರ್ಕೇಟ್, ಜಯನಗರ, ವಿಲ್ಸನ್ ಗಾರ್ಡನ್, ಎಂಜಿ ರಸ್ತೆ, ವಿವೇಕ ನಗರ, ಕೋರಮಂಗಲ, ಎಚ್.ಎಸ್.ಆರ್ ಲೇಔಟ್, ಬೆಳ್ಳಂದೂರು, ವರ್ತೂರು, ಸರ್ಜಾಪುರ, ಮಾರತ್ಹಳ್ಳಿ, ಕಾಡುಗೋಡಿ, ವೈಟ್ ಫೀಲ್ಡ್, ಕೆ.ಆರ್.ಪುರಂ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗಿದೆ.
ದಿಢೀರ್ ಮಳೆಗೆ ಬೆಂಗಳೂರಿನ ರಸ್ತೆಗಳು ಜಲಾವೃತಗೊಂಡಿದ್ದು, ಕೆಲವು ಕಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ಹೆಬ್ಬಾಳದಲ್ಲಿ ತಗ್ಗು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿದೆ.
ಬೆಂಗಳೂರು ಮಾತ್ರವಲ್ಲದೆ ದೊಡ್ಡಬಳ್ಳಾಪುರ, ಮಂಡ್ಯ, ಕೋಲಾರ, ದಾವಣಗೆರೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿಯೂ ಗುರುವಾರ ಉತ್ತಮ ಮಳೆಯಾಗಿದೆ.
ಈ ಮಧ್ಯೆ, ಸೆಪ್ಟೆಂಬರ್ 2 ರಿಂದ 7 ರವೆರೆಗೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದ್ದು, ಕೆಲವು ಜಿಲ್ಲೆಗಳಲ್ಲಿಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.