ಪ್ರತಿಷ್ಠಿತ ಕಂಪೆನಿಗಳಾದ ಟಿಸಿಎಸ್‌, ಇನ್ಫಿ, ವಿಪ್ರೋದಿಂದ 64000 ಉದ್ಯೋಗಿಗಳ ಕಡಿತ

ಬೆಂಗಳೂರು(ಏ.21): ಎಂಜಿನಿಯರಿಂಗ್‌ ಹಾಗೂ ತಾಂತ್ರಿಕ ಪದವೀಧರರನ್ನು ಕಳೆದ 2 ದಶಕಗಳಿಂದ ಭಾರಿ ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದ್ದ ದೇಶದ ಮೂರು ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿಗಳಾದ ಟಿಸಿಎಸ್‌, ಇನ್ಫೋಸಿಸ್ ಹಾಗೂ ವಿಪ್ರೋ ಇದೀಗ ಉದ್ಯೋಗ ಕಡಿತ ಆರಂಭಿಸಿವೆ.

ಕಳೆದ ಹಣಕಾಸು ವರ್ಷದಲ್ಲಿ ಈ ಮೂರು ಕಂಪನಿಗಳ ಒಟ್ಟು ನೌಕರರ ಸಂಖ್ಯೆಯಲ್ಲಿ 64000ದಷ್ಟು ಇಳಿಕೆ ಕಂಡುಬಂದಿದೆ. ಇದರರ್ಥ- ಅಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ.

ಕೋವಿಡ್‌ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ನೌಕರರನ್ನು ಕಂಪನಿಗಳು ನೇಮಕ ಮಾಡಿಕೊಂಡಿದ್ದವು. ಹೀಗಾಗಿ ಕಡಿತ ಮಾಡುತ್ತಿವೆ ಎಂದು ಕೆಲ ಖಾಸಗಿ ಸಲಹೆಗಾರರು ಹೇಳಿದರೆ, ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಕಂಡುಬರುವ ಸಾಧ್ಯತೆ ಕಂಡುಬರುವ ಕಾರಣ ಕಂಪನಿಗಳು ನೌಕರಿ ಕಡಿತ ಮಾಡುತ್ತಿವೆ ಎಂದು ಇನ್ನೂ ಕೆಲವರು ತಿಳಿಸುತ್ತಾರೆ. ಇನ್ನೂ ಕೆಲವರು ಎಐನಿಂದಾಗಿ ಈ ರೀತಿ ಆಗುತ್ತಿದೆ ಎನ್ನುತ್ತಾರೆ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ಇನ್ಫೋಸಿಸ್ ಮತ್ತು ವಿಪ್ರೋ ಕನಿಷ್ಠ 20 ವರ್ಷಗಳಲ್ಲಿ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಕಡಿತವಾಗಿದೆ. ಮಾರ್ಚ್ 31, 2024 ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಮೂರು ಕಂಪನಿಗಳು ಒಟ್ಟಾಗಿ 63,759 ಉದ್ಯೋಗಿಗಳನ್ನು ಕಳೆದುಕೊಂಡಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲೂ ಬಿಇ ಪದವೀಧರರಿಗೆ ಶುಭ ಸೂಚನೆ ಕಂಡುಬರುತ್ತಿಲ್ಲ. ಏಕೆಂದರೆ, ಈ ಹಣಕಾಸು ವರ್ಷದಲ್ಲಿ ತನ್ನ ಆದಾಯ ಬೆಳವಣಿಗೆ ಶೇ.1ರಿಂದ ಶೇ.3ರಷ್ಟು ಮಾತ್ರವೇ ಇರುವ ಸಾಧ್ಯತೆ ಇದೆ ಎಂದು ಇನ್ಫೋಸಿಸ್ ಹೇಳಿಕೊಂಡಿದೆ. ತನ್ನ ಆದಾಯದಲ್ಲಿ ಶೇ.1.5ರಷ್ಟು ಕುಸಿತ ಕಂಡುಬರಬಹುದು. ಜೂನ್‌ ತ್ರೈಮಾಸಿಕದಲ್ಲಿ ಮಾತ್ರ ಶೇ.0.5ರಷ್ಟು ಏರಿಕೆಯಾಗಬಹುದು ಎಂದು ವಿಪ್ರೋ ಹೇಳಿದೆ. ಹೀಗಾಗಿ ಈ ಕಂಪನಿಗಳು ಹೊಸ ಉದ್ಯೋಗ ನೇಮಕಾತಿ ಮಾಡಿಕೊಳ್ಳುವ ಪ್ರಮಾಣ ಕಡಿಮೆಯಾಗಿ, ಹಾಲಿ ನೌಕರರ ಕಡಿತವನ್ನು ಹೆಚ್ಚಳ ಮಾಡಬಹುದು ಎಂಬ ಭೀತಿ ಆರಂಭವಾಗಿದೆ.

Latest Indian news

Popular Stories