ವಿಡಿಯೋ ಮಾಡಿಕೊಂಡವರ ಬಗ್ಗೆ ಮಾತನಾಡಿ, ಹಂಚಿಕೊಂಡವರ ಬಗ್ಗೆಯಲ್ಲ: ಸಚಿವ ಚೆಲುವರಾಯಸ್ವಾಮಿ

ಬೆಂಗಳೂರು: “ವಿಡಿಯೋ ಮಾಡಿಕೊಂಡವರ ಕೃತ್ಯದ ಬಗ್ಗೆ ಮಾತನಾಡುವುದು ಬಿಟ್ಟು, ವಿಡಿಯೋ ಹಂಚಿಕೆಯ ಬಗ್ಗೆ ಮಾತನಾಡಲಾಗುತ್ತಿದೆ. ಇದರಲ್ಲಿ ಡಿ.ಕೆ.ಶಿವಕುಮಾರ್ ಅವರ ಮಧ್ಯ ಪ್ರವೇಶವಾಗಿಲ್ಲ” ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಕಿಡಿಕಾರಿದರು.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಹಗರಣದಲ್ಲಿ ಯಾವುದೇ ಕಾರಣಕ್ಕೂ ಡಿ.ಕೆ.ಶಿವಕುಮಾರ್ ಅವರು ಮಧ್ಯ ಪ್ರವೇಶ ಮಾಡಿಲ್ಲ.

ನೂರಕ್ಕೆ ನೂರರಷ್ಟು ಈ ವಿಚಾರಕ್ಕೂ ಅವರಿಗೂ ಸಂಬಂಧವಿಲ್ಲ. ಅವರು ಟೀಕೆ ಮಾಡಿದ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷರು ತಿರುಗೇಟು ನೀಡಿದ್ದಾರೆ. ಈ ವಿಚಾರಕ್ಕೂ ಮೊದಲೇ ಇಬ್ಬರ ನಡುವೆ ಟೀಕೆ, ಟಿಪ್ಪಣಿಗಳು ನಡೆದಿವೆ ಎಂದರು.

ಈ ಅನಾಚಾರವನ್ನು ಯಾರೋ ವಿಡಿಯೋ ಮಾಡಿದ್ದಲ್ಲ. ಸ್ವತಃ ಅವರೇ ಮಾಡಿಕೊಂಡಿರುವುದು. ಇದು ಹಾಸನದಲ್ಲಿಯೇ ಎಲ್ಲರಿಗೂ ಹಂಚಿಕೆಯಾಗಿದೆ. ಸಾಮಾಜಿಕ ಜಾಲತಾಣಗಳಿಗೆ ಸೋರಿಕೆಯಾದ ನಂತರ ಯಾವುದೂ ಸಹ ಯಾರ ಹಿಡಿತಕ್ಕೂ ಸಿಗುವುದಿಲ್ಲ. ವಿಚಾರ ಗಾಳಿಗೆ ಹೋದ ಮೇಲೆ ಯಾವ ದಿಕ್ಕಿಗೆ ಹೋಗುತ್ತದೆ ಎನ್ನುವುದು ಯಾರಿಗೂ ತಿಳಿದಿಲ್ಲ ಎಂದರು.

ಇಂತಹ ಸೂಕ್ಷ್ಮವಾದ ವಿಚಾರವನ್ನು ಜನತಾದಳದವರು ಬೀದಿ ರಂಪ ಮಾಡುತ್ತಿದ್ದಾರೆ. ಯಾವ ವಿಚಾರಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಯಾವ ಸಾಧನೆ ಮಾಡಿದ್ದಾರೆ ಎಂದು ಪ್ರತಿಭಟನೆಗೆ ರಾಜ್ಯದಾದ್ಯಂತ ಕರೆ ಕೊಟ್ಟಿದ್ದಾರೆ ಎಂದು ತಿಳಿದಿಲ್ಲ. ಈ ವಿಚಾರ ಬೇರೆ ದಿಕ್ಕಿಗೆ ಹೋಗಲಿ ಎಂದು ರಾಜಕೀಕರಣ ಮಾಡಲು ದಳದವರು ಹೊರಟಿದ್ದಾರೆ ಎಂದು ಹೇಳಿದರು.

Latest Indian news

Popular Stories