
ಭಾವಚಿತ್ರ ಹಾಕುವ ವಿಚಾರಕ್ಕೆ ಗಲಾಟೆ: ಅವಾಚ್ಯವಾಗಿ ಬೈದಾಡಿಕೊಂಡ MLA, ಎಂಎಲ್‌ಸಿ
ಬೀದರ್ : ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ದುಬಲಗುಂಡಿ ಗ್ರಾಮದಲ್ಲಿ ಶುಕ್ರವಾರ ಬ್ಯಾನರ್‌ನಲ್ಲಿ ಭಾವಚಿತ್ರ ಹಾಕದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸಿದ್ದಲಿಂಗಪ್ಪ ಪಾಟೀಲ ಹಾಗೂ ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯ ಭೀಮಾರಾವ್ ಪಾಟೀಲ ಅವರು ಅವಾಚ್ಯ ಪದಗಳಿಂದ ಬೈದಾಡಿಕೊಂಡರು. ಇಬ್ಬರೂ ಕೈಕೈ ಮೀಲಾಯಿಸುವ ಹಂತಕ್ಕೆ ತಲುಪಿದಾಗ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಜೆಜೆಎಂ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದ ವೇದಿಕೆ ಮೇಲಿನ ಬ್ಯಾನರ್‌ನಲ್ಲಿ ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯರ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರ ಭಾವಚಿತ್ರ ಹಾಕಿಲ್ಲ ಎಂಬ ವಿಚಾರಕ್ಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ಪಂಚಾಯಿತಿಯ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿತ್ತು.
ಈ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ಸಿದ್ದಲಿಂಗಪ್ಪ ಪಾಟೀಲ ಅವರು ಅವಾಚ್ಯ ಪದಗಳಿಂದ ಬೈಯುತ್ತ ವೇದಿಕೆ ಕಡೆಗೆ ಬರುತ್ತಿದ್ದರು. ಅದಾಗಲೇ ವೇದಿಕೆ ಮೇಲಿದ್ದ ಭೀಮಾರಾವ್ ಪಾಟೀಲ ಸಹ ಬೈಯುತ್ತ ಕೆಳಗೆ ಬಂದರು. ಈ ವೇಳೆ ಇಬ್ಬರ ನಡುವಿನ ವಾಗ್ವಾದ ವಿಕೋಪಕ್ಕೆ ಹೋಗಿ ಕೈಕೈ ಮಿಲಾಯಿಸುವ ಹಂತ ತಲುಪಿತು.
ತಕ್ಷಣವೇ ಸಿಪಿಐ ಗುರುಪಾಟೀಲ ಸೇರಿದಂತೆ ಪೊಲೀಸ್ ಸಿಬ್ಬಂದಿ ಮಧ್ಯ ಪ್ರವೇಶಿಸಿ ಇಬ್ಬರನ್ನೂ ತಡೆದರು. ಅಷ್ಟರಲ್ಲೇ ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯ ಚಂದ್ರಶೇಖರ ಪಾಟೀಲ ಹಾಗೂ ಕಾಂಗ್ರೆಸ್–ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡರು. ನಂತರ ಶಾಸಕ ಸಿದ್ದಲಿಂಗಪ್ಪ ಪಾಟೀಲ ಹಾಗೂ ಭೀಮರಾವ್ ಪಾಟೀಲ ಜಂಟಿಯಾಗಿ ಭೂಮಿಪೂಜೆ ನೆರವೇರಿಸಿ ವೇದಿಕೆಗೆ ಬಂದರು.
‘ಜೆಜೆಎಂ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ನಮ್ಮ ಭಾವಚಿತ್ರವನ್ನು ಏಕೆ ಹಾಕಿಲ್ಲ’ ಎಂದು ಭೀಮಾರಾವ್ ಪಾಟೀಲ ಅವರು ಎಇಇ ಶಾಮಸುಂದರ್ ಕಾಳೇಕರ್ ಅವರನ್ನು ಪ್ರಶ್ನಿಸಿದರು. ‘ಶಿಷ್ಟಾಚಾರ ಉಲ್ಲಂಘನೆ ಆಗಿದೆ. ಕಾರ್ಯಕ್ರಮ ನಡೆಸಲು ಬಿಡುವುದಿಲ್ಲ’ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದಲಿಂಗಪ್ಪ ಪಾಟೀಲ, ‘ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ. ವಿಧಾನ ಪರಿಷತ್ ಸದಸ್ಯರ ಭಾವಚಿತ್ರ ಅಳವಡಿಸಬೇಕು ಎಂದು ಎಲ್ಲೂ ಶಿಷ್ಟಾಚಾರ ಇಲ್ಲ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳನ್ನು ಕೇಳಿ’ ಎಂದು ಸಮರ್ಥಿಸಿಕೊಂಡರು.
‘ಕಾರ್ಯಕ್ರಮವನ್ನು ಬಹಿಷ್ಕರಿಸುತ್ತೇವೆ’ ಎಂದು ಹೇಳಿ ಭೀಮಾರಾವ್ ಪಾಟೀಲ ವೇದಿಕೆಯಿಂದ ಹೊರಟರು. ನಂತರ ಸಿದ್ದಲಿಂಗಪ್ಪ ಪಾಟೀಲ ನೇತೃತ್ವದಲ್ಲಿ ವೇದಿಕೆ ಕಾರ್ಯಕ್ರಮ ಜರುಗಿತು.




