Bidar

ಅಂತರರಾಷ್ಟ್ರೀಯ ಮಟ್ಟದಲ್ಲಿ ಬೀದರ್‌ ಗುರುತಿಸಿಕೊಳ್ಳಲು ಪ್ರಮುಖ ಕಾರಣೀಕರ್ತ ಗವಾನ್ ಸಮಾಧಿಗೆ ಇಲ್ಲ ರಕ್ಷಣೆ

ಬೀದರ್‌: 15ನೇ ಶತಮಾನದಲ್ಲಿ ಅತಿದೊಡ್ಡ ಸಾಮ್ರಾಜ್ಯದಲ್ಲಿ ಪ್ರಧಾನಿಯಾಗಿ ಕೆಲಸ ನಿರ್ವಹಿಸಿ ಸಾಕಷ್ಟು ಸುಧಾರಣೆಗಳಿಗೆ ಕಾರಣವಾಗಿ ನಿಜವಾದ ಜನನಾಯಕ ಅನಿಸಿಕೊಂಡಿದ್ದ ವ್ಯಕ್ತಿಯ ಸಮಾಧಿ ಸ್ಥಳ ಸುರಕ್ಷಿತವಾಗಿಲ್ಲ! ಆಶ್ಚರ್ಯವೆನಿಸಿದರೂ ಇದು ಕಟು ಸತ್ಯ.

ಬಹಮನಿ ಸಾಮ್ರಾಜ್ಯದಲ್ಲಿ ಪ್ರಧಾನಿಯಾಗಿದ್ದ ಮಹಮೂದ್‌ ಗಾವಾನ್‌ ಸಮಾಧಿ ಕಣ್ಣೆದುರೆ ಸ್ಥಳ ಹಾಳಾಗುತ್ತಿದೆ. ಸುತ್ತಲಿನ ಜಾಗ ಅತಿಕ್ರಮಣವಾಗುತ್ತಿದೆ. ಹೀಗಿದ್ದರೂ ಅದರ ರಕ್ಷಣೆಗೆ ಯಾರೂ ಸೊಲ್ಲು ಎತ್ತುತ್ತಿಲ್ಲ. ನಗರ ಹೊರವಲಯದ ಗೋರನಳ್ಳಿಯಲ್ಲಿ ಮಹಮೂದ್‌ ಗಾವಾನ್‌ ಸಮಾಧಿ ಸ್ಥಳವಿದೆ. ರಿಯಲ್‌ ಎಸ್ಟೇಟ್‌ ಹಾವಳಿಯಿಂದ ಅದಕ್ಕೆ ಸೇರಿದ ಹೆಚ್ಚಿನ ಸ್ಥಳ ಅತಿಕ್ರಮಣವಾಗಿದೆ.

ಕೆಲ ಇತಿಹಾಸ ಪ್ರಿಯರ ಒತ್ತಡಕ್ಕೆ ಮಣಿದು ಸಮಾಧಿ ಸ್ಥಳದ ಸುತ್ತಲೂ ಕಾಂಪೌಂಡ್‌ ನಿರ್ಮಿಸಲಾಗಿದೆ. ಸಮಾಧಿ ಮೇಲೆ ತಗಡಿನ ಶೀಟುಗಳಿಂದ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಅದು ಕೂಡ ಆಗಾಗ ಕಳುವಾಗುತ್ತ ಇರುತ್ತದೆ. ಇಡೀ ಆವರಣದಲ್ಲಿ ದಟ್ಟವಾದ ಪೊದೆ ಬೆಳೆದಿದ್ದು, ಹಾವು, ಚೇಳು ಸೇರಿದಂತೆ ಇತರೆ ವಿಷ ಜಂತುಗಳು ಸೇರಿಕೊಂಡಿವೆ. ಯಾರೂ ಕೂಡ ಅಲ್ಲಿಗೆ ಹೋಗಲಾರದ ಪರಿಸ್ಥಿತಿ ಇದೆ.

ಕೆಲ ವರ್ಷಗಳ ಹಿಂದೆ ಅಲ್ಲಿ ‘ಸಂದಲ್‌’ ಆಚರಣೆ ಕೂಡ ನಡೆಯುತ್ತಿತ್ತು. ಆ ಮೂಲಕ ಮಹಮೂದ್‌ ಗಾವಾನ್‌ನನ್ನು ಸ್ಮರಿಸುವ ಕೆಲಸವಾಗುತ್ತಿತ್ತು. ಈಗ ಅದು ಕೂಡ ನಿಂತಿದೆ. ಈಗ ಆ ಜಾಗೆಯ ಮೇಲೂ ಕೆಲವರ ಕಣ್ಣು ಬಿದ್ದಿದ್ದು, ಅದನ್ನು ಸಂರಕ್ಷಿಸಬೇಕೆನ್ನುವುದು ಇತಿಹಾಸಪ್ರಿಯರ ಒತ್ತಾಯ.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ಬೀದರ್‌ ಗುರುತಿಸಿಕೊಳ್ಳಲು ಪ್ರಮುಖ ಕಾರಣೀಕರ್ತ ವ್ಯಕ್ತಿಯೆಂದರೆ ಮಹಮೂದ್‌ ಗಾವಾನ್‌. ಕನಿಷ್ಠ ಆತನ ಸಮಾಧಿ ಸ್ಥಳ ರಕ್ಷಿಸಿ, ಅದನ್ನು ಪ್ರವಾಸಿ ತಾಣದ ರೂಪದಲ್ಲಿ ಬೆಳೆಸುವ ಕೆಲಸವಾಗುತ್ತಿಲ್ಲ. ಇದು ಬಹಳ ದುರದೃಷ್ಟಕರ ಸಂಗತಿ’ ಎಂದು ಪರಿಸರ ಹೋರಾಟಗಾರರೂ ಆಗಿರುವ ಇತಿಹಾಸಕಾರ ವಿನಯ್‌ ಮಾಳಗೆ ವಿಷಾದಿಸಿದರು.

‘ಈಗ ಬೀದರ್‌ ನಗರ ಸಾಕಷ್ಟು ಬೆಳೆದಿದೆ. ಅನೇಕ ಭೂಗಳ್ಳರ ಕಣ್ಣು ಅದರ ಮೇಲೆ ಬಿದ್ದಿದೆ. ಈಗಲೇ ಅದನ್ನು ಅಭಿವೃದ್ಧಿ ಪಡಿಸದಿದ್ದರೆ ಭವಿಷ್ಯದಲ್ಲಿ ಯಾವುದೇ ಕುರುಹುಗಳು ಕೂಡ ಸಿಗುವುದಿಲ್ಲ. ಇತಿಹಾಸದ ದೊಡ್ಡ ವ್ಯಕ್ತಿಗೆ ಅಪಚಾರ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ವಕ್ಫ್‌ ಬೋರ್ಡ್‌ ಗಮನ ಹರಿಸಿ ಕ್ರಮ ಜರುಗಿಸಬೇಕು.

ಗಾವಾನ್‌ಗೆ ಸಂಬಂಧಿಸಿದ ವಿವರಗಳನ್ನು ಹಾಕಿಸಬೇಕು’ ಎಂದು ಒತ್ತಾಯಿಸಿದರು. ‘ವಾಸ್ತವದಲ್ಲಿ ಅಲ್ಲಿ ಏನಾಗಿದೆ ಎನ್ನುವುದರ ಬಗ್ಗೆ ಗಮನಹರಿಸಲು ವಕ್ಫ್‌ ಬೋರ್ಡ್‌ ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ‘THG ಕನ್ನಡ’ಗೆ ಪ್ರತಿಕ್ರಿಯಿಸಿದ್ದಾರೆ.

THG Bidar

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button