Bidar

ಬೀದರ್‌ ವಿ.ವಿ.ಗೆ ಎರಡು ಹಂತದಲ್ಲಿ ಅನುದಾನ: ಪ್ರೊ.ಎಸ್.ಆರ್.ನಿರಂಜನ್

ಬೀದರ್‌: ‘ನೂತನ ಬೀದರ್‌ ವಿಶ್ವವಿದ್ಯಾಲಯಕ್ಕೆ ಸರ್ಕಾರವು ಎರಡು ಹಂತದಲ್ಲಿ ಅನುದಾನ ಬಿಡುಗಡೆಗೊಳಿಸಲಿದೆ. ಇದರಿಂದ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಬಹುದು’ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ್ ತಿಳಿಸಿದರು.

ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ₹25 ಕೋಟಿ, ಎರಡನೇ ಹಂತದಲ್ಲಿ ₹50 ಕೋಟಿ ಅನುದಾನ ಬಿಡುಗಡೆಗೊಳಿಸಲಿದೆ. ಇದರಿಂದ ವಿಶ್ವವಿದ್ಯಾಲಯದ ಸರ್ವತೋಮುಖ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ವಿಶ್ವವಿದ್ಯಾಲಯವು 322 ಎಕರೆ ಪ್ರದೇಶದಲ್ಲಿ ಹರಡಿದೆ. ಇದನ್ನು ಮಾದರಿ ವಿಶ್ವವಿದ್ಯಾಲಯವಾಗಿ ಮಾಡಬೇಕಾಗಿದೆ. ಜಮೀನಿನ ಸುತ್ತ ತಡೆಗೋಡೆ, ಆಡಳಿತ ಕಟ್ಟಡ, ಗ್ರಂಥಾಲಯ ಕಟ್ಟಡ, ವಿಜ್ಞಾನ ಪ್ರಯೋಗಾಲಯಗಳು, ಆಟದ ಮೈದಾನ, ಪರೀಕ್ಷಾ ಭವನ, ಸಿಬ್ಬಂದಿ ವಸತಿಗೃಹ ಹೀಗೆ ಅಗತ್ಯವಿರುವ ಕಟ್ಟಡಗಳನ್ನು ನಿರ್ಮಿಸಬಹುದು.

ವಿಶ್ವವಿದ್ಯಾಲಯದ ಕಟ್ಟಡಗಳ ಅಭಿವೃದ್ಧಿಗೆ ಮುಖ್ಯವಾಗಿ ಅನುದಾನದ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು. ಕರ್ನಾಟಕದ ಕಿರೀಟ ಗಡಿಭಾಗ ಬೀದರ್‌ ಜಿಲ್ಲೆಯಲ್ಲಿ ನೂತನವಾಗಿ ಆರಂಭವಾಗಿರುವ ವಿಶ್ವವಿದ್ಯಾಲಯವು ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ವರದಾನವಾಗಿದೆ. ಸ್ಥಳೀಯ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವಂತೆ ವಿಶ್ವವಿದ್ಯಾಲಯವನ್ನು ಕಟ್ಟುವ ಅವಶ್ಯಕತೆಯಿದೆ. ಆ ದಿಸೆಯಲ್ಲಿ ವಿಶ್ವವಿದ್ಯಾಲಯದ ಸರ್ವತೋಮುಖ ಬೆಳವಣಿಗೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಕುಲಪತಿ ಪ್ರೊ.ಎಸ್‌.ಬಿ. ಬಿರಾದಾರ, ಕುಲಸಚಿವ ಪ್ರೊ. ಪರಶಿವ ನಾಯಕ, ಡೀನರಾದ ‌ಜಗನ್ನಾಥ ಹೆಬ್ಬಾಳೆ, ರವೀಂದ್ರನಾಥ ವಿ. ಗಬಾಡಿ, ದೇವಿದಾಸ ತುಮಕುಂಟೆ, ಶರಣಪ್ಪ ಎಂ., ಮಲ್ಲಿಕಾರ್ಜುನ ಕನಕಟ್ಟೆ ಹಾಜರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button