ಬೀದರ್‌: 90 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ

ಮಾ. 25ರಿಂದ ಏಪ್ರಿಲ್‌ 6ರ ವರೆಗೆ ಜಿಲ್ಲೆಯ 90 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿದ್ದು, ಯಾವುದೇ ಅಕ್ರಮ ನಡೆಯದಂತೆ ಸುಸೂತ್ರವಾಗಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.

ನಗರದಲ್ಲಿ ಮಂಗಳವಾರ ನಡೆದ ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆ ಪೂರ್ವಭಾವಿ ವಿಡಿಯೊ ಕಾನ್ಫರೆನ್ಸ್‌ ಸಭೆಯಲ್ಲಿ ಅವರು ಮಾತನಾಡಿದರು.

‘ಎಲ್ಲಾ ಪರೀಕ್ಷಾ ಕೊಠಡಿಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಒಂದು ಫ್ಲಾಯಿಂಗ್‌ ಸ್ಕ್ವಾಡ್‌ ಇರಬೇಕು. ಈ ಸಲ ಬೀದರ್‌ ಜಿಲ್ಲೆಯಲ್ಲಿ ಒಟ್ಟು 29,645 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು. ಯಾವುದೇ ಗೊಂದಲಗಳಾಗದಂತೆ ಎಚ್ಚರ ವಹಿಸಬೇಕು’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಲೀಂ ಪಾಶಾ ಅವರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಮಾತನಾಡಿ,’ಈ ಸಲ ತುಂಬಾ ಬಿಗಿ ನಿಯಮಗಳು ಜಾರಿಗೆ ತರಲಾಗಿದೆ. ಪ್ರತಿಯೊಂದು ಕೂಡ ಸಿಸಿಟಿ‌ವಿಯಲ್ಲಿ ರೆಕಾರ್ಡ್ ಆಗುತ್ತದೆ. ಪರೀಕ್ಷೆಗಳಲ್ಲಿ ಯಾವುದೇ ನಕಲು ನಡೆಯದಂತೆ ಎಚ್ಚರ ವಹಿಸಬೇಕು’ ಎಂದು ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಲೀಂ ಪಾಶಾ ಮಾತನಾಡಿ,’ಮಾ. 25ರಂದು ಪ್ರಥಮ ಭಾಷಾ ಪರೀಕ್ಷೆ, 27ರಂದು ಸಮಾಜ ವಿಜ್ಞಾನ, 30ರಂದು ವಿಜ್ಞಾನ ಮತ್ತು ಏ. 2ರಂದು ಗಣಿತ, 3ರಂದು ಅರ್ಥಶಾಸ್ತ್ರ (ಅಂಧ ಮಕ್ಕಳಿಗೆ), 4ರಂದು ತೃತೀಯ ಭಾಷೆ, 6ರಂದು ದ್ವಿತೀಯ ಭಾಷೆಗಳ ಪರೀಕ್ಷೆ ನಡೆಯಲಿದೆ. ಜಿಲ್ಲೆಯ 560 ಶಾಲೆಗಳಲ್ಲಿ ಮಕ್ಕಳು ಪರೀಕ್ಷೆಗಳನ್ನು ಬರೆಯುವರು’ ಎಂದು ಮಾಹಿತಿ ನೀಡಿದರು.

27,194 ವಿದ್ಯಾರ್ಥಿಗಳು ಮೊದಲ ಸಲ ಪರೀಕ್ಷೆ ಬರೆಯುತ್ತಿದ್ದಾರೆ. ರಿಪೀಟರ್‌ 2,451 ಸೇರಿ ಒಟ್ಟು 29,645 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು. ಒಟ್ಟು 90 ಪರೀಕ್ಷಾ ಕೇಂದ್ರಗಳಿದ್ದು, 16 ಸೂಕ್ಷ್ಮ, 5 ಅತಿ ಸೂಕ್ಷ್ಮ ಕೇಂದ್ರಗಳಿವೆ. ಒಟ್ಟು 1,309 ಕೋಣೆಗಳಿವೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್,. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ, ಡಿವೈಎಸ್‌ಪಿ ಶಿವನಗೌಡ ಪಾಟೀಲ, ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳ ಸೂಪರಿಟೆಂಡೆಂಟ್‌, ಉಪ ಮುಖ್ಯ ಸೂಪರಿಟೆಂಡೆಂಟ್‌, ಬಿಇಒ, ತಹಶೀಲ್ದಾರ್‌ಗಳು ಭಾಗವಹಿಸಿದ್ದರು.

Latest Indian news

Popular Stories