ಬೀದರ್: ರಾಜ್ಯದ 8 ಕಡೆ ಹಾಗೂ ನೆರೆಯ ತೆಲಂಗಾಣದ 1 ಕಡೆ ಮತ್ತು ಮಹಾರಾಷ್ಟ್ರ 3 ಕಡೆ ಬ್ಯಾಂಕ್ ಎಟಿಎಂ ನಲ್ಲಿನ ಹಣ ಲೂಟಿ ಮಾಡಿದ ಆರೋಪಿತರ ಗುಂಪಿನ ಮೂವರನ್ನು ಬೀದರ್ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕದ ಬೀದರ್ ಜಿಲ್ಲೆಯ ಹಳ್ಳಿಖೆಡ್ ಬಿ ,ಬಸವಕಲ್ಯಾಣ, ಚಿಟಗುಪ್ಪ ,ವಿಜಯಪುರ ಜಿಲ್ಲೆಯ 2 ಕಡೆ ಮತ್ತು ಬೆಳಗಾವಿಯ ಯಮಕನಮರಡಿ,ಅಂಕಲಿ ಚಿಕ್ಕೋಡಿ ಸೇರಿದಂತೆ ಒಟ್ಟು 8 ಕಡೆ ಮತ್ತು ನೆರೆಯ ತೆಲಂಗಾಣದ ಸದಾಶಿವಪೇಟ ಹಾಗೂ ಮಹಾರಾಷ್ಟ್ರದ ಉಮಾರ್ಗ ಮತ್ತು ಮುರುಮ ಸೇರಿದಂತೆ 4 ಕಡೆ ಒಟ್ಟು 12 ಎಟಿಎಂ ಗಳಲ್ಲಿ 1,58,26,700 ಹಣ ಲೂಟಿ ಮಾಡಿ ಪರಾರಿಯಾಗಿದ್ದ ಮೇವತ ಗ್ಯಾಂಗ್ ನ ಮೂವರು ಬೀದರ್ ಪೊಲೀಸರ ಅತಿಥಿಯಾಗಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ 7 ಆರೋಪಿಗಳ ಪೈಕಿ ಹರಿಯಾಣ ರಾಜ್ಯದ ಶಾಹಿದ್ ಕಮಲ್ ಖಾನ್ , ರಿಹನ್ ಅಕ್ಬರ್ ಖಾನ್,ಇಲಿಯಾಸ್ ಅಬ್ದುಲ್ ರೆಹಮಾನ್ ರನ್ನು ಬಂಧಿಸಲಾಗಿದ್ದು,ತಲೆಮರೆಸಿಕೊಂಡ 4 ಜನ ಆರೋಪಿತರ ಪತ್ತೆ ಕಾರ್ಯ ಮುಂದುವರೆದಿದೆ.
ಬಂಧಿತರಿಂದ ಸುಮಾರು 9,50,000 ರೂಪಾಯಿ ನಗದು ,ಬಿಳಿ ಬಣ್ಣದ ಕ್ರಿಟ್ ಕಾರನ್ನು ಜಪ್ತಿ ಮಾಡಲಾಗಿದ್ದು,ಆರೋಪಿತರು ಗೂಗಲ್ ಮ್ಯಾಪ್ ಸಹಾಯದೊಂದಿಗೆ ಟೋಲ್ ಗೇಟ್ ಇಲ್ಲದ ರಸ್ತೆಯಲ್ಲಿ ನಕಲಿ ನಂಬರ್ ಪ್ಲೇಟ್ ಇರುವ ಕಾರನ್ನು ಬಳಸಿ ಗ್ಯಾಸ್ ವೆಲ್ಡಿಂಗ್ ಮೂಲಕ ATM ಕತ್ತರಿಸಿ ಕೃತ್ಯ ಎಸಗಿದ್ದಾರೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್ ಎಲ್ ತಿಳಿಸಿದ್ದಾರೆ.