ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

ಹಿರಿಯ ಸಿವಿಲ್‌ ನ್ಯಾಯಾಧೀಶರೂ ಆದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಕೆ.ಕನಕಟ್ಟೆ ಅವರು ಮೂವರು ದಂಪತಿಗೆ ಸಂಸಾರದ ಮಹತ್ವದ ಮನವರಿಕೆ ಮಾಡಿಸಿ ಒಂದು ಮಾಡಿದರು.

ಬೀದರ್‌ನ ಮೈಲೂರಿನ ಸುಮಯ್ಯಾ ಬೇಗಂ ಹಾಗೂ ಶಮಿ, ನೌಬಾದಿನ ಪೂಜಾ ಹಾಗೂ ಸಂತೋಷ, ನೌಬಾದ್‌ನವರೇ ಆದ ಸುಕೃತಾ ಹಾಗೂ ರಾಹುಲ್‌ ಪುನಃ ಒಂದಾದ ಜೋಡಿ. ಸಣ್ಣಪುಟ್ಟ ಕಾರಣಗಳಿಗಾಗಿ ದಂಪತಿ ಠಾಣೆ ಮೆಟ್ಟಿಲೇರಿದ್ದರು.

‘ಮದುವೆ ಮತ್ತು ಕುಟುಂಬಕ್ಕೆ ಸಾಮಾಜಿಕವಾಗಿ ಹೆಚ್ಚಿನ ಮಹತ್ವ ಇದೆ. ಸಂಸಾರದಲ್ಲಿ ಭಾವನೆ, ಸಾಮರಸ್ಯ ಮತ್ತು ಸಂಸ್ಕೃತಿಗೆ ವಿಶೇಷ ಮಹತ್ವ ಇದೆ. ಕುಟುಂಬ ಸಂತಸವಾಗಿದ್ದರೆ ಇಡೀ ಸಮುದಾಯ ಮತ್ತು ಸಮಾಜ ಎರಡೂ ಸುಂದರವಾಗಿರುತ್ತದೆ. ಚಿಕ್ಕ ಪುಟ್ಟ ವಿಚಾರಗಳಿಗೆ ಪೋಲಿಸ್ ಠಾಣೆ, ನ್ಯಾಯಾಲಯಕ್ಕೆ ಅಲೆದಾಡುವ ಬದಲು ಮನೆಯ ಹಿರಿಯರು ಹುಡುಗ/ಹುಡುಗಿಯ ಸಮಸ್ಯೆಯನ್ನು ಆಲಿಸಿ ಸಮಸ್ಯೆ ಇತ್ಯರ್ಥಪಡಿಸಿದರೆ ಉತ್ತಮ. ನೆಮ್ಮದಿಯಿಂದ ಬಾಳಿದರೆ ಸಂಸಾರಕ್ಕೊಂದು ಅರ್ಥ’ ಎಂದು ಎಸ್.ಕೆ.ಕನಕಟ್ಟೆ ಹೇಳಿದರು.

Latest Indian news

Popular Stories