ಚಿಲ್ಲರ್ಗಿ, ಹಮಿಲಾಪುರ, ಚಿಮಕೋಡ್, ಗಾದಗಿ ಗ್ರಾಮಗಳಿಗೆ ಶಾಸಕರಾದ ರಹೀಂ ಖಾನ್ ಭೇಟಿ

ಬೀದರ ಜೂನ್ 12 (ಕ.ವಾ.): ಬೀದರ ಶಾಸಕರಾದ ರಹೀಂ ಖಾನ್ ಅವರು ಜೂನ್ 12ರಂದು ಬೀದರ ತಾಲೂಕಿನಲ್ಲಿ ಪ್ರವಾಸ ಕೈಗೊಂಡು ಚಿಲ್ಲರ್ಗಿ, ಹಮಿಲಾಪುರ, ಚಿಮ್‌ಕೋಡ್ ಮತ್ತು ಗಾದಗಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದರು.
ಕುಟುಂಬವೊAದರಲ್ಲಿನ ಮೂವರು ವಿಕಲಚೇತನರ ಪೈಕಿ ಒಬ್ಬರೇ ಮಾಸಾಶನ ಪಡೆಯುತ್ತಿದ್ದಾರೆ ಎಂಬ ಸಂಗತಿ ತಿಳಿದ ಕೂಡಲೇ ಶಾಸಕರು, ತಹಸೀಲ್ದಾರ ಅವರಿಗೆ ವಿಷಯ ತಿಳಿಸಿ ಈ ವಿಷಯವನ್ನು ತಾಲೂಕು ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಉಳಿದವರಿಗೂ ಮಾಸಾಶನ ಮಂಜೂರಾತಿಗೆ ತುರ್ತಾಗಿ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಚಿಮಕೋಡ್ ಗ್ರಾಮಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಶಾಸಕರು, ಮಳೆಯಿಂದಾಗಿ ಹಾನಿಗೊಳಗಾದ ಮನೆಗಳ ವೀಕ್ಷಣೆ ನಡೆಸಿದರು. ಮಳೆಯಿಂದಾದ ಹಾನಿಯ ಬಗ್ಗೆ ಪರಿಶೀಲನೆ ನಡೆಸಿ, ಹಾನಿ ಅನುಭವಿಸಿದ ಸಂತ್ರಸ್ಥರಿಗೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಗ್ರಾಮಸ್ಥರಿಗೆ ಧೈರ್ಯ ತುಂಬಿದರು. ಗಾಳಿಮಳೆಯಿಂದಾಗಿ ವಿದ್ಯುತ್ ತಂತಿಗಳು ಸಡಿಲಗೊಂಡಿವೆ ಎಂದು ಗ್ರಾಮಸ್ಥರು ತಿಳಿಸಿದ ಕೂಡಲೇ ಶಾಸಕರು ಜೆಸ್ಕಾಂನ ಅಧಿಕಾರಿಗಳಿಗೆ ಕರೆ ಮಾಡಿ ಅದನ್ನು ಕೂಡಲೇ ಸರಿಪಡಿಸಬೇಕು ಎಂದು ಕೆಇಬಿಯ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ನಿರ್ದೇಶನ ನೀಡಿದರು.
ಹಮಿಲಾಪುರ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಶಾಸಕರು, ಗ್ರಾಮಸ್ಥರ ಅಹವಾಲು ಆಲಿಸಿದರು. ಕುಡಿವ ನೀರಿಗೆ ತೊಂದರೆಯಾಗಿದ್ದು ಹೊಸ ಬೋರವೆಲ್ ಕೊರೆಯಿಸಬೇಕು. ಗ್ರಾಮದಲ್ಲಿ ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಸಬೇಕು ಎಂದು ಅಲ್ಲಿನ ಗ್ರಾಮಸ್ಥರು ಶಾಸಕರಿಗೆ ತಿಳಿಸಿದರು. ತಮ್ಮ ಬೇಡಿಕೆಗಳನ್ನು ಆಧ್ಯತೆಯ ಮೇರೆಗೆ ಪರಿಶೀಲಿಸಿ ಪರಿಹಾರ ಕಲ್ಪಿಸುವುದಾಗಿ ಶಾಸಕರು ಭರವಸೆ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ: ಶಾಸಕರು ಇದೆ ವೇಳೆ ಚಿಲ್ಲರ್ಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು. ಕೋವಿಡ್ ಮಾರ್ಗಸೂಚಿ ಅನುಸಾರ ಆಯಾ ಗ್ರಾಮಗಳಲ್ಲಿನ ಅರ್ಹ ಎಲ್ಲರಿಗೂ ಕೋವಿಡ್ ಲಸಿಕೆಯನ್ನು ತಪ್ಪದೇ ನೀಡಲು ಕ್ರಮ ವಹಿಸಬೇಕು ಎಂದು ಇದೆ ವೇಳೆ ಅಲ್ಲಿನ ವೈದ್ಯಾಧಿಕಾರಿಗಳು ಮತ್ತು ನರ್ಸ್ ಅವರಿಗೆ ನಿರ್ದೇಶನ ನೀಡಿದರು.
ಹತ್ತಿ ಖರೀದಿ ಕೇಂದ್ರ ಸ್ಥಾಪನೆಗೆ ಪ್ರಯತ್ನ: ಶಾಸಕರು ಯರನಳ್ಳಿ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿ, ಬಿತ್ತನೆ ಬೀಜ ವಿತರಣೆಯ ಬಗ್ಗೆ ಮಾಹಿತಿ ಪಡೆದರು. ಇದೆ ವೇಳೆ ಶಾಸಕರು ಕೃಷಿ ಇಲಾಖೆಯ ಜಂಟಿ ನಿರ್ದೇಶಕರೊಂದಿಗೆ ಮಾತನಾಡಿ, ಗಾದಗಿ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಬೆಳೆಯುವ ರೈತರ ಅನುಕೂಲಕ್ಕಾಗಿ ಗಾದಗಿ ಗ್ರಾಮದಲ್ಲಿ ಹತ್ತಿ ಖರೀದಿ ಕೇಂದ್ರವನ್ನು ಸ್ಥಾಪಿಸಲು ಪ್ರಯತ್ನಿಸಿ ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಬೀದರ ತಹಸೀಲ್ದಾರ ಗಂಗಾದೇವಿ ಸಿ.ಎಚ್., ತಾಪಂ ಸಹಾಯಕ ನಿರ್ದೇಶಕರು ಹಾಗೂ ಪಿಡಿಓ ಅವರು ಇದ್ದರು.

Latest Indian news

Popular Stories