ವಿಶ್ವದ ಅತಿ ದೊಡ್ಡ ಕೋವಿಡ್-19 ಲಸಿಕಾ ಮೇಳಕ್ಕೆ ಚಾಲನೆ

ಬೀದರ ಜೂನ್ 21 (ಕ.ವಾ.): ವಿಶ್ವದ ಅತಿ ದೊಡ್ಡ ಕೋವಿಡ್-19 ಲಸಿಕಾ ಮೇಳ ಕಾರ್ಯಕ್ರಮಕ್ಕೆ ಬೀದರ ಜಿಲ್ಲೆಯಲ್ಲಿ ಕೂಡ ಜೂನ್ 21ರಂದು ಚಾಲನೆ ಸಿಕ್ಕಿತು.
ಶಿವನಗರ ದಕ್ಷಿಣದ ಹನುಮಾನ ಮಂದಿರದ ಆವರಣದಲ್ಲಿ ಜೂನ್ 21ರಂದು ನಡೆದ ಲಸಿಕಾ ಮೇಳದ ಕಾರ್ಯಕ್ರಮವನ್ನು ಸಂಸದರಾದ ಭಗವಂತ ಖೂಬಾ ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸಂಸದರು, ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ನೀಡಿದ ಆಶ್ವಾಸನೆಯಂತೆ ದೇಶದಾದ್ಯಂತ ಬೃಹತ್ ಪ್ರಮಾಣದಲ್ಲಿ ಕೋವಿಡ್ ಲಸಿಕಾ ಮೇಳ ಚಾಲನೆ ಸಿಕ್ಕಿದೆ. ಈ ಮೇಳಕ್ಕೆ ಜೂನ್ 21ರಂದು ಬೀದರನಲ್ಲಿ ಕೂಡ ಚಾಲನೆ ಸಿಕಿದೆ. ಅಂತೆಯೇ ಸರ್ಕಾರದ ಮಾರ್ಗಸೂಚಿಯನುಸಾರ ಪ್ರತಿಯೊಬ್ಬರು ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಮಾತನಾಡಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿ ಕೋವಿಡ್-19 ಲಸಿಕಾ ಮೇಳ ನಡೆಯುತ್ತಿದೆ. ಈ ಲಸಿಕಾ ಮೇಳದಲ್ಲಿ 45 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಭಾರತ ಸರ್ಕಾರದ ವ್ಯಾಖ್ಯಾನದಂತೆ ಆರೋಗ್ಯ ಕಾರ್ಯಕರ್ತರು ಮತ್ತು ಮಂಚೂಣಿ ಕಾರ್ಯಕರ್ತರಿಗೆ ಲಸೀಕಾಕರಣ ನಡೆಯುತ್ತಿದೆ. 18 ರಿಂದ 44 ವರ್ಷ ವಯೋಮಾನದವರ ರಾಜ್ಯ ಗುರುತಿಸಿರುವ ದುರ್ಬಲ ಗುಂಪಿನ ಫಲಾನುಭವಿಗಳು ಮತ್ತು ರಾಜ್ಯ ಕರೋನ ಮಂಚೂಣಿ ಕಾರ್ಯಕರ್ತರ ಲಸೀಕಾರಣ ನಡೆಯುತ್ತಿದೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಹೀರಾ ನಸೀಮ್ ಅವರು ಮಾತನಾಡಿ, ಕೋವಿಡ್-19 ಲಸಿಕಾ ಮೇಳದ ಯಶಸ್ವಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿ ಕೂಡ ಶ್ರಮಿಸಲಿದ್ದಾರೆ ಎಂದು ತಿಳಿಸಿದರು. ಕೋವ್ಯಾಕ್ಸಿನ್ ಲಸಿಕೆಯ ಮೊದಲನೇ ಡೋಸ್ ಲಸೀಕಾರಣ ಮತ್ತು 2ನೇ ಡೋಸ್‌ಗೆ ಬಾಕಿ ಇರುವ ಫಲಾನುಭವಿಗಳ ಲಸೀಕಾರಣ ಕೂಡ ಇದೆ ವೇಳೆ ನಡೆಯುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ.ರೆಡ್ಡಿ ಅವರು ಮಾತನಾಡಿ, ಬೀದರ ಜಿಲ್ಲೆಯಲ್ಲಿ 450 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಲಸಿಕಾ ಮೇಳದ ಆರಂಭದ ದಿನವಾದ ಜೂನ್ 21ರಂದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಒಟ್ಟು 35,000 ಲಸಿಕೆ ಲಭ್ಯವಿದ್ದು ಇಲ್ಲಿವರೆಗೆ 30,000 ಜನರಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ವೈದ್ಯಾಧಿಕಾರಿಗಳಾದ ಡಾ.ಮಾರ್ಥಂಡ್ ಖಾಶೆಂಪೂರಕರ, ಡಾ.ರಾಜಶೇಖರ ಪಾಟೀಲ, ಜಿಲ್ಲಾಧಿಕಾರಿಗಳ ಕಚೇರಿಯ ಸತೀಶ ವಾಲೆ ಹಾಗೂ ಇತರರು ಇದ್ದರು.

Latest Indian news

Popular Stories