ಮಹಾಮಾರಿ ಕೋವಿಡ್‌ ಎದುರಿಸಲು ಜಿಲ್ಲಾ ಆರೋಗ್ಯ ಇಲಾಖೆ ಸಜ್ಜು

ಬೀದರ್‌: ಮಹಾಮಾರಿ ಕೊರೊನಾ ರೂಪಾಂತರಿ ಜೆ.ಎನ್‌.1 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಜಿಲ್ಲೆಯಲ್ಲಿ ಅದನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋವಿಡ್‌ ಮೊದಲ ಮತ್ತು ಎರಡನೇ ಅಲೆ ಬಂದಾಗ ಬೀದರ್‌ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಬ್ರಿಮ್ಸ್‌) ಹೊಂದಿಕೊಂಡಿರುವ ಹಳೆಯ ಆಸ್ಪತ್ರೆಯ ಕಟ್ಟಡದಲ್ಲಿ ವಿಶೇಷ ಕೋವಿಡ್‌ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು.
ಕೋವಿಡ್‌ ಬಳಿಕ ಆಸ್ಪತ್ರೆ ಸಂಪೂರ್ಣ ನವೀಕರಣಗೊಂಡಿದ್ದು, ಈ ಸಲವೂ ಅದೇ ಆಸ್ಪತ್ರೆಯ ಕಟ್ಟಡವನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಐದು ಹಾಸಿಗೆಯ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ.

ಗಡಿ ಜಿಲ್ಲೆ ಬೀದರ್ ಒಂದು ಕಡೆ ಮಹಾರಾಷ್ಟ್ರ, ಇನ್ನೊಂದು ಕಡೆ ತೆಲಂಗಾಣ ರಾಜ್ಯಕ್ಕೆ ಗಡಿ ಹೊಂದಿದೆ. ಅದರಲ್ಲೂ ನೆರೆಯ ಹೈದರಾಬಾದ್‌, ಕೊಲ್ಲಾಪುರ, ಸೊಲ್ಲಾಪುರ, ಪುಣೆ, ಮುಂಬೈ ಮಹಾನಗರಗಳಿಗೆ ವ್ಯಾಪಾರ ವಹಿವಾಟು, ಶಿಕ್ಷಣ ಸೇರಿದಂತೆ ಇತರೆ ಉದ್ದೇಶಗಳಿಗೆ ನಿತ್ಯ ಹೋಗಿ ಬರುವವರು ಹೆಚ್ಚಿದ್ದಾರೆ.

ವಿಶೇಷವಾಗಿ ಕೆಮ್ಮು, ನೆಗಡಿ, ಜ್ವರದಿಂದ ಹೆಚ್ಚು ಬಳಲುತ್ತ ಆಸ್ಪತ್ರೆಗೆ ಬಂದರೆ ಅಂತಹವರನ್ನು ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಲು ನಿರ್ದೇಶನ ಕೊಡಲಾಗಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಜಿಲ್ಲೆಯಾದ್ಯಂತ ಚಳಿಯ ಪ್ರಮಾಣ ಹೆಚ್ಚಾಗಿದೆ.

ಕೆಮ್ಮು, ನೆಗಡಿ, ದಮ್ಮು, ಶೀತ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಏರಿಕೆಯಾಗಿದೆ. ಇದರಿಂದ ಸಹಜವಾಗಿಯೇ ಆರೋಗ್ಯ ಇಲಾಖೆಯವರ ಚಿಂತೆ ಮತ್ತಷ್ಟು ಹೆಚ್ಚಿಸಿದೆ. ಯಾರೇ ಕೆಮ್ಮು, ನೆಗಡಿ, ಶೀತ ಜ್ವರದಿಂದ ಬಳಲುತ್ತಿದ್ದರೆ ತಕ್ಷಣವೇ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕು. ಅದರಲ್ಲೂ ಮಕ್ಕಳು, ಹಿರಿಯ ನಾಗರಿಕರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು. ಆರೋಗ್ಯ ಸಂಬಂಧಿತ ಸಮಸ್ಯೆಗಳಿದ್ದವರೂ ಜನನಿಬಿಡ ಸ್ಥಳಗಳಲ್ಲಿ ಓಡಾಡದಂತೆ ಆರೋಗ್ಯ ಇಲಾಖೆ ಸಲಹೆ ಮಾಡಿದೆ.

THG ಬೀದರ್

Latest Indian news

Popular Stories