Bidar

ಔರಾದ್ ತಗಡಿನ ಶೆಡ್‌ನಲ್ಲಿ ಅಂಬೇಡ್ಕರ್ ವಸತಿ ಶಾಲೆ ಗ್ರಾಮೀಣ ಶಾಲೆ ಪಟ್ಟಣಕ್ಕೆ ಸ್ಥಳಾಂತರ: ಆದರೂ ಕಟ್ಟಡ ಸಮಸ್ಯೆ

ಔರಾದ್: ಡಾ.ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಗೆ ಸೂಕ್ತ ಕಟ್ಟಡ ವ್ಯವಸ್ಥೆ ಇಲ್ಲದೆ ಸಮಸ್ಯೆಯಾಗಿದೆ. ಗಡಿ ಭಾಗದ ಗ್ರಾಮೀಣ ಹೆಣ್ಣು ಮಕ್ಕಳಿಗೆ ಅತ್ಯುತ್ತಮ ಶೈಕ್ಷಣಿಕ ಸೌಲಭ್ಯದ ಜತೆಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಆರಂಭವಾದ ಡಾ. ಅಂಬೇಡ್ಕರ್ ವಸತಿ ಶಾಲೆಗೆ ಒಂದು ಕಡೆ ನೆಲೆ ಇಲ್ಲದಂತಾಗಿದೆ. ವಾಸ್ತವವಾಗಿ ಈ ಶಾಲೆ ಕಮಲನಗರ ತಾಲ್ಲೂಕಿನ ದಾಬಕಾ ಹೋಬಳಿ ಕೇಂದ್ರಕ್ಕೆ ಮಂಜೂರಾಗಿತ್ತು.

ಆದರೆ, ಕಳೆದ ಆರು ವರ್ಷಗಳಿಂದ ಔರಾದ್ ತಾಲ್ಲೂಕು ಕೇಂದ್ರದ ಸುತ್ತ ಮುತ್ತಲು ನಡೆಯುತ್ತಿದೆ. ಒಂದು ವರ್ಷ ಪಟ್ಟಣದ ಎಪಿಎಂಸಿ ಪ್ರಾಂಗಣದ ಖಾಸಗಿ ಕಟ್ಟಡದಲ್ಲಿ ನಡೆದಿದೆ. ನಂತರ ನಾಲ್ಕು ವರ್ಷ ವನಮಾರಪಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆಸಲಾಯಿತು. ಈಗ 2021 ರಿಂದ ಔರಾದ್ ಪಟ್ಟಣದ ಖಾಸಗಿ ಕಟ್ಟಡವೊಂದರಲ್ಲಿ ನಡೆಯುತ್ತಿದೆ. ‘ಈ ಅಂಬೇಡ್ಕರ್ ವಸತಿ ಶಾಲೆ ಮಂಜೂರಾಗಿದ್ದು ದಾಬಕಾದಲ್ಲೇ. ಆದರೆ, ಅಲ್ಲಿ ಬಾಡಿಗೆ ಕಟ್ಟಡ ಸಿಗದ ಕಾರಣ ಔರಾದ್‌ನಲ್ಲಿ ನಡೆಸುತ್ತಿದ್ದೇವೆ. ಈಗ ಅಲ್ಲಿ ಸರ್ಕಾರದಿಂದ ಜಾಗ ಮಂಜೂರಾಗಿದೆ. ಹೊಸ ಕಟ್ಟಡ ಆದ ನಂತರ ಅಲ್ಲಿಗೆ ಹೋಗುತ್ತೇವೆ’ ಎನ್ನುತ್ತಾರೆ

ಪ್ರಾಂಶುಪಾಲ ಪ್ರಕಾಶ ದುಧಮಾಂಡೆ. ‘ನಮ್ಮ ಊರಿಗೆ ಮಂಜೂರಾದ ಶಾಲೆ ನಮ್ಮಲ್ಲೇ ನಡೆಸಬೇಕು. ಆದರೆ, ಅಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಔರಾದ್‌ನಲ್ಲಿ ನಡೆಸುತ್ತಿದ್ದಾರೆ. ಈ ಬಗ್ಗೆ ನಾವು ಮೇಲಾಧಿಕಾರಿಗಳ ಗಮನಕ್ಕೂ ತಂದಿದ್ದೇವೆ’ ಎಂದು ದಾಬಕಾ ನಿವಾಸಿ ರಾಮ ರಾವಣಗಾವೆ ಹೇಳುತ್ತಾರೆ.

ಸೂಕ್ತ ಸೌಲಭ್ಯದ ಕೊರತೆ: 6ರಿಂದ 10ನೇ ತರಗತಿ ವರೆಗಿನ ಈ ವಸತಿ ಶಾಲೆಯಲ್ಲಿ 233 ವಿದ್ಯಾರ್ಥಿನಿಯರಿದ್ದಾರೆ. ಆದರೆ ಬಾಲಕಿಯರ ಸಂಖ್ಯೆಗೆ ತಕ್ಕಂತೆ ಸೂಕ್ತ ವ್ಯವಸ್ಥೆ ಇಲ್ಲ ಎಂಬುದು ಪಾಲಕರ ಗೋಳು. ‘ಎರಡು ಕಟ್ಟಡ ಬಾಡಿಗೆ ಪಡೆದು ಒಂದರಲ್ಲಿ ತರಗತಿ ನಡೆಸುತ್ತೇವೆ. ಮತ್ತೊಂದರಲ್ಲಿ ವಿದ್ಯಾರ್ಥಿಗಳಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೆಲ ತರಗತಿಗೆ ಕೂರಲೂ ಬೆಂಚ್ ವ್ಯವಸ್ಥೆ ಇಲ್ಲ. ಮಂಚದ ವ್ಯವಸ್ಥೆಯೂ ಇಲ್ಲ’ ಎನ್ನುತ್ತಾರೆ ವಸತಿ ಶಾಲೆ ಶಿಕ್ಷಕರು. ‘ಕೆಲ ತರಗತಿ ತಗಡಿನ ಶೆಡ್‌ನಲ್ಲಿ ನಡೆಸುತ್ತಾರೆ. ಮನೆ ಉದ್ದೇಶಕ್ಕಾಗಿ ಕಟ್ಟಿದ ಕಟ್ಟಡ ತರಗತಿ ನಡೆಸಲು ಎಷ್ಟು ಯೋಗ್ಯ ನೀವೇ ಊಹಿಸಿ’ ಎಂದು ಪಾಲಕರೊಬ್ಬರು ಪ್ರಶ್ನೆ ಮಾಡುತ್ತಾರೆ.

ವಾರ್ಡ್‌ನ್‌ ಸೇರಿದಂತೆ ಎಂಟು ಶಿಕ್ಷಕ ಹುದ್ದೆ ಖಾಲಿ ಇವೆ. ಅತಿಥಿ ಶಿಕ್ಷಕರನ್ನು ಬಳಸಿಕೊಂಡು ಪಾಠ ಮಾಡುತ್ತಿದ್ದಾರೆ. ಮೊದಲೇ ನಮ್ಮ ಮಕ್ಕಳು ಗ್ರಾಮೀಣ ಪ್ರದೇಶದಿಂದ ಬಂದವರು. ಇಂಗ್ಲಿಷ್ ಮಾಧ್ಯಮ ಇರುವುದರಿಂದ ಅಗತ್ಯ ಶೈಕ್ಷಣಿಕ ಸೌಲಭ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಇದು ಇಲ್ಲಿ ಆಗುತ್ತಿಲ್ಲ’ ಎಂದು ಪಾಲಕರು ಗೋಳು ತೋಡಿಕೊಂಡಿದ್ದಾರೆ.

THG ಬೀದರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button