ಗೋಶಾಲೆಗಳಿಗೆ ಅನುದಾನ: ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳ ಸೂಚನೆ

ಬೀದರ ಜುಲೈ 11 (ಕರ್ನಾಟಕ ವಾರ್ತೆ):- ಪ್ರಾಣಿ ದಯಾ ಸಂಘದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರ ಅಧ್ಯಕ್ಷತೆಯಲ್ಲಿ ಜುಲೈ 9ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಾಣಿ ದಯಾ ಸಂಘದ ಸಭೆ ನಡೆಯಿತು.
ಪಿಂಜಾರಪೋಲ್ ಮತ್ತು ಇತರೆ ಗೋಶಾಲೆಗಳಿಗೆ ಬೆಂಬಲ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಪಿಂಜಾರಪೋಲ್ ಗೋಶಾಲೆಗಳಿಗೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸುವಾಗ ದರ್ಪಣ್ ಪೋರ್ಟಲ್‌ನಲ್ಲಿ ಯುನಿಕ್ ಐಡೀ ಕ್ರಿಯೇಟ್ ಮಾಡಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ, ದರ್ಪಣ ಪೋರ್ಟಲ್‌ನಲ್ಲಿ ಯುನಿಕ್ ಐಡಿ ಕ್ರಿಯೇಟ್ ಮಾಡಲು ಕೆಲವೊಂದು ತಾಂತ್ರಿಕ ತೊಂದರೆ ಬರುತ್ತಿರುವುದರಿಂದ ಯುನಿಕ್ ಐಡಿ ಇಲ್ಲದಿದ್ದರೂ ಗೋಶಾಲೆಗಳ ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಪ್ರಸ್ತಾವನೆ ಸಲ್ಲಿಸಲು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ನಿದೇಶಕರು ತಿಳಿಸಿದ್ದಾರೆ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ರವಿಕುಮಾರ ಬೂರೆ ಅವರು ಸಭೆಗೆ ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಪ್ರಸ್ತುತ ಚಾಲ್ತಿಯಲ್ಲಿರುವ ಗೋಶಾಲೆಗಳಲ್ಲಿನ ಜಾನುವಾರುಗಳ ನಿರ್ವಹಣೆಗಾಗಿ ಸರಕಾರದಿಂದ ಪಿಂಜರಾಪೋಲ್ ಯೋಜನೆ ಅಡಿಯಲ್ಲಿ ನೀಡಲಾಗುವ ಅನುದಾನವನ್ನು ಪಡೆಯಲು ಅಗತ್ಯ ದಾಖಲಾತಿಗಳೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದರು. ಗೋಶಾಲೆಗಳಿಗೆ ಅನುದಾನ ಬಿಡುಗಡೆ ಮಾಡುವಾಗ ಕಡ್ಡಾಯವಾಗಿ ದರ್ಪಣ ಪೋರ್ಟಲನಲ್ಲಿ ಯುನಿಕ್ ಐಡಿ ಪಡೆದಿರುವ ಗೋಶಾಲೆಗಳಿಗೆ ಮಾತ್ರ ಅನುದಾನ ನೀಡಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು ಸುತ್ತೋಲೆ ಹೊರಡಿಸಿ ತಿಳಿಸಿದ ನಿಯಮಪಾಲನೆ ಮಾಡಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಹೀರಾ ನಸೀಮ್, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ನಗರಸಭೆ ಪೌರಾಯುಕ್ತರಾದ ರವೀಂದ್ರನಾಥ ಅಂಗಡಿ, ಪ್ರಾಣಿಕಲ್ಯಾಣ ಮಂಡಳಿಯ ನಾಮನಿರ್ದೇಶಿತ ಸದಸ್ಯರಾದ ಶ್ರೀ ಬಂಡೆಪ್ಪ ಕಂಠೆ, ಶಿವಾಜಿರಾವ್ ಕಾಳೆ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಗೌತಮ ಅರಳಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಪಶುಪಾಲನಾ ಇಲಾಖೆಯ ಎಲ್ಲ ತಾಲ್ಲೂಕಿನ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರು ಸಭೆಯಲ್ಲಿ ಹಾಜರಿದ್ದರು.

Latest Indian news

Popular Stories