ಎರಡು ದಿನ ಕರಾವಳಿಯಲ್ಲಿ ಸಿಡಿಲು-ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

ಬೆಂಗಳೂರು, ಡಿಸೆಂಬರ್ 11: ಸೋಮವಾರದಿಂದ ಎರಡು ದಿನಗಳ ಕಾಲ ಬೆಂಗಳೂರು ಮತ್ತು ಕರ್ನಾಟಕದ ಇತರ 12 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ಮುನ್ಸೂಚನೆಯಂತೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ (ದ.ಕ), ಉತ್ತರ ಕನ್ನಡ, ಉಡುಪಿ, ಬೆಂಗಳೂರು ನಗರ ದಕ್ಷಿಣ ಜಿಲ್ಲೆಗಳು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮೈಸೂರು, ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಮತ್ತು ಭಾನುವಾರ ಸಂಜೆ ಧಾರಾಕಾರ ಮಳೆ ಸುರಿದಿದೆ. ಭಾನುವಾರ ಬೆಳ್ಳಂಬೆಳಗ್ಗೆ ಉಡುಪಿ ಜಿಲ್ಲೆಯ ಕೆಲವೆಡೆ ಮಳೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಜಿರೆ, ಧರ್ಮಸ್ಥಳ, ಬೆಳ್ತಂಗಡಿ, ಇಂದಬೆಟ್ಟು, ಮುಂಡಾಜೆ, ನಾರಾವಿ, ಅಳದಂಗಡಿ, ಗುರುವಾಯನಕೆರೆ, ಪುತ್ತೂರು, ಬಂಟ್ವಾಳ, ಸುಳ್ಯ, ಬೆಳ್ಳಾರೆ, ಕುಕ್ಕೆ, ಸುಬ್ರಹ್ಮಣ್ಯ, ಕಡಬ, ಮದ್ಯಡ್ಕ, ಕಡಿರುದ್ಯಾವರ, ಕೊಂಬಾರ್, ಅಲಂಕಾರ್ ಭಾಗದಲ್ಲಿ ಭಾರಿ ಮಳೆಯಾಗಿದೆ.

ಏಕಾಏಕಿ ಸುರಿದ ಮಳೆಯಿಂದಾಗಿ ಕೋಲ, ಯಕ್ಷಗಾನ ಮುಂತಾದ ರಾತ್ರಿಯ ಕಾರ್ಯಕ್ರಮಗಳಿಗೆ ತೊಂದರೆಯಾಯಿತು. ಧರ್ಮಸ್ಥಳದಲ್ಲಿ ಆಯೋಜಿಸಲಾಗಿದ್ದ ಗುರುಕಿರಣ್ ರಾತ್ರಿಗೂ ಮಳೆಯಿಂದಾಗಿ ಆಡಚಣೆಯಾಗಿದೆ.

ಕಾರ್ನಾಡ್ ಸದಾಶಿವನಗರ ನಿವಾಸಿ ಜೋಚಿಂ ಕ್ರಾಸ್ತಾ (64) ಅವರ ಮೃತದೇಹ ಮುಲ್ಕಿ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದೆ. ಸಿಡಿಲು ಬಡಿದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಬಂಟ್ವಾಳದ ವಿಟ್ಲ ಸಮೀಪದ ಬೈರಿಕಟ್ಟೆ ಎಂಬಲ್ಲಿ ಸಿಡಿಲು ಬಡಿದು ಮನೆಯೊಂದಕ್ಕೆ ಅಪಾರ ಹಾನಿಯಾಗಿದೆ. ಶನಿವಾರ ರಾತ್ರಿ 11.15ರ ಸುಮಾರಿಗೆ ಐತಪ್ಪ ನಾಯ್ಕರ ಮನೆಗೆ ಸಿಡಿಲು ಬಡಿದಿದೆ.

ಮನೆಯ ಪಕ್ಕದ ಪಂಪ್ ಶೆಡ್‌ಗೆ ಸಿಡಿಲು ಬಡಿದು ಪುಣಚ ಕೆಲ್ಲಳ್ಳಿ ದೇವಪ್ಪ ನಾಯಿಕ ಎಂಬುವವರ ಮನೆಯ ವಸ್ತುಗಳು ಹಾನಿಗೀಡಾಗಿವೆ.

ರಾಧಾಕೃಷ್ಣ ಶೆಟ್ಟಿ ಅವರು ನಡೆಸುತ್ತಿದ್ದ ಕನ್ಯಾನ ಮಾರುಕಟ್ಟೆಯಲ್ಲಿರುವ ಬೇಕರಿಯ ತಿಂಡಿ ತಯಾರಿ ಕೊಠಡಿಗೆ ಸಿಡಿಲು ಬಡಿದಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸಕಾಲಕ್ಕೆ ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.

ಬೈಕಂಪಾಡಿಯ ಮೀನಕಳಿಯ ವಿದ್ಯಾರ್ಥಿ ಸಂಘದ ಬಳಿ ವೆಂಕಟೇಶ್ ಕೆ ಬಂಗೇರ ಎಂಬವರ ಮನೆಗೆ ಸಿಡಿಲು ಬಡಿದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

Latest Indian news

Popular Stories