ರಾಜ್ಯದ ಈ 12 ಜಿಲ್ಲೆಗಳಿಗೆ ಮಳೆ ಸಾಧ್ಯತೆ, ಚಳಿ ವಾತಾವರಣ ಮುಂದುವರಿಕೆ

ಬೆಂಗಳೂರು, ಡಿಸೆಂಬರ್ 17: ಕರ್ನಾಟಕ ರಾಜ್ಯದಲ್ಲಿ ಚಳಿ ಜೊತೆಗೆ ಮೋಡ ಮುಸುಕಿದ ವಾತಾವರಣವೇ ಮುಂದುವರಿಯುವ ನಿರೀಕ್ಷೆ ಇದೆ. ಮುಂದಿನ ಎರಡು ದಿನ ರಾಜ್ಯ ಕೆಲ ಸುಮಾರು 12 ಜಿಲ್ಲೆಗಳಲ್ಲಿ ಮಳೆ ಬೀಳುವ ಲಕ್ಷಣಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ವಿವಿಧ ಭಾಗದ ಜಿಲ್ಲೆಗಳಲ್ಲಿ ಮಳೆ ಜೊತೆಗೆ ಚಳಿ ಪ್ರಮಾಣ ಏರಿಕೆ ಆಗಿತ್ತು. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಧಿಕ ಚಳಿ ದಾಖಲಾಗಿತ್ತು. ಇನ್ನುಳಿದಂತೆ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆ ಆಗಿತ್ತು.

ಈಗಲೂ ಸಹ ಅಂತದ್ದೆ ವಾತಾವರಣ ಕಂಡು ಬರಲಿದೆ. ಉತ್ತರ ಒಳನಾಡಿನಲ್ಲಿ ಚಳಿ ತಕ್ಕಮಟ್ಟಿಗೆ ಕಡಿಮೆ ಆಗಲಿದೆ. ಮಧ್ಯಾಹ್ನ ಶುಷ್ಕ ವಾತಾವರಣವೇ ಮುಂದುವರಿಯಲಿದೆ. ಇನ್ನೂ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಸುಮಾರು 12 ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಹಗುರ ಮಳೆ, ಕೆಲವೆಡೆ ಜೋರು ಮಳೆ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಮತ್ತು ಶಿವಮೊಗ್ಗ ಹಾಗೂ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಾಳೆ ಸೋಮವಾರ (ಡಿಸೆಂಬರ್ 18) ಮತ್ತು ಮಂಗಳವಾರ (ಡಿಸೆಂಬರ್ 19) ದಂದು ಎರಡು ದಿನ ಆಗಾಗ ತುಂತುರು ಮಳೆ ಆಗಲಿದೆ ಎಂದು ಐಎಂಡಿ ತಿಳಿಸಿದೆ.

ಕಳೆದ ವಾರ ವಿಜಯಪುರ ಜಿಲ್ಲೆ, ಹಾವೇರಿ, ಬಾಗಲಕೋಟೆ, ಧಾರವಾರ, ಬೆಳಗಾವಿ ಸೇರಿದಂತೆ ವಿವಿಧೆಡೆ 16-12 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನ ದಾಖಲಾಗಿತ್ತು. ಆದರೆ ಈಗ ಕನಿಷ್ಠ ತಾಪಮಾನದಲ್ಲಿ ತುಸು ಏರಿಕೆ ಆಗಿದ್ದು, 15-20 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಈ ಮೂಲಕ ಈ ಭಾಗದ ಜಿಲ್ಲೆಗಳಲ್ಲಿ ಚಳಿ ಕಡಿಮೆ ಆಗುತ್ತಿದೆ.

ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರುತ್ತದೆ. ಬೆಳಗ್ಗೆ ಮಬ್ಬು ವಾತಾವರಣ ಜೊತೆಗೆ ತುಸು ಚಳಿ ಕಂಡು ಬರಲಿದೆ. ನಗರ ಜಿಲ್ಲೆಯಲ್ಲಿ ಒಂದೆರಡು ಕಡೆಗಳಲ್ಲಿ ತುಂತುರು ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Latest Indian news

Popular Stories