
ತೀವ್ರ ಚಳಿ: ಇಂದಿನಿಂದ 4 ದಿನಗಳ ಕಾಲ 1ರಿಂದ 8ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ರಜೆ!
ದೆಹಲಿ-ಎನ್ಸಿಆರ್ ಸೇರಿದಂತೆ ಉತ್ತರ ಭಾರತದ ಎಲ್ಲಾ ರಾಜ್ಯಗಳು ತೀವ್ರ ಚಳಿ ಮತ್ತು ಮಂಜಿನ ಹಿಡಿತಕ್ಕೆ ತತ್ತರಿಸಿ ಹೋಗಿದ್ದು, ಹವಾಮಾನ ಇಲಾಖೆ ಪ್ರಕಾರ, ಮಂಜು ಮತ್ತು ಶೀತದ ಅಲೆಗಳ ಹಾವಳಿ ಮುಂದಿನ ಮೂರು ದಿನಗಳವರೆಗೆ ಮುಂದುವರಿಯಲಿದೆ ಎಂದು ಇಳಿದು ಬಂದಿದೆ.
ತೀವ್ರ ತರದ ಮಂಜು-ಚಳಿಯಿಂದಾಗಿ ದೇಶದ ಕೆಲವು ರಾಜ್ಯಗಳಲ್ಲಿ ಕೆಲವೆಡೆ ಶಾಲೆಗಳಿಗೆ ರಜೆ ನೀಡಲಾಗಿದ್ದು, ಕೆಲವೆಡೆ ಶಾಲಾ ಅವಧಿಯ ಸಮಯ ಬದಲಾವಣೆ ಮಾಡಲಾಗಿದೆ.
ಘಾಜಿಯಾಬಾದ್ನಲ್ಲಿ 1 ನೇ ತರಗತಿಯಿಂದ 8 ನೇ ತರಗತಿಯವರೆಗಿನ ಶಾಲೆಗಳ ಸಮಯವನ್ನು ಬದಲಾಯಿಸಲಾಗಿದ್ದು, ಡಿಸೆಂಬರ್ 28 ರಿಂದ ಶಾಲೆಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ತೆರೆದಿರುತ್ತವೆ ಎಂದು ಶಿಕ್ಷಣಾಧಿಕಾರಿ (ಬಿಎಸ್ಎ) ಆದೇಶ ಹೊರಡಿಸಿದ್ದಾರೆ.
ಅಲಿಗಢದಲ್ಲಿಯೂ ಚಳಿಯಿಂದಾಗಿ ಮುಂದಿನ ಎರಡು ದಿನಗಳ ಕಾಲ ಶಾಲೆಗಳಿಗೆ ರಜೆ ನೀಡಲಾಗಿದೆ. ಯುಪಿ ಬೋರ್ಡ್ನಿಂದ ಸಿಬಿಎಸ್ಇ, ಐಸಿಎಸ್ಇ ಬೋರ್ಡ್ವರೆಗಿನ ಶಾಲೆಗಳು ಡಿಸೆಂಬರ್ 29 ರವರೆಗೆ ಮುಚ್ಚಲ್ಪಡುತ್ತವೆ.
ಅದೇ ರೀತಿ, ಜಲೌನ್ನಲ್ಲಿ 1 ರಿಂದ 8 ನೇ ತರಗತಿಯ ಶಾಲೆಗಳು ಡಿಸೆಂಬರ್ 31 ರವರೆಗೆ ಮುಚ್ಚಲ್ಪಡುತ್ತವೆ. ಉತ್ತರ ಪ್ರದೇಶದ ಇಟಾಹ್ನಲ್ಲಿ, 1 ರಿಂದ 8 ನೇ ತರಗತಿಯವರೆಗಿನ ಶಾಲೆಗಳಿಗೆ ಡಿಸೆಂಬರ್ 28 ತನಕ ರಜೆ ನೀಡಲಾಗಿದೆ.
ವಿಪರೀತ ಶೀತದ ಅಲೆ ಮತ್ತು ದಟ್ಟವಾದ ಮಂಜಿನಿಂದಾಗಿ ಇಟಾಹ್ನಲ್ಲಿ ಶಾಲೆಗಳನ್ನು ಮುಚ್ಚುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರೇಮ್ ರಂಜನ್ ಸಿಂಗ್ ಆದೇಶ ಹೊರಡಿಸಿದ್ದಾರೆ.
ಮತ್ತೊಂದೆಡೆ, ಮಥುರಾದಲ್ಲಿ ಶಾಲೆಗಳ ಸಮಯವನ್ನು ಸಹ ಬದಲಾಯಿಸಲಾಗಿದೆ. ಪ್ರಸ್ತುತ ಶಾಲೆಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ತೆರೆದಿರುತ್ತವೆ.
ದೇಶದ ಹಲವು ರಾಜ್ಯಗಳಲ್ಲಿ ಚಳಿಯ ಆರ್ಭಟ ಜೋರಾಗಿದ್ದು, ಉತ್ತರ ಭಾರತದಲ್ಲಂತೂ ಮೈಕೊರೆಯುವ ಚಳಿ ಜನರ ಜೀವ ಹಿಂಡುತ್ತಿದೆ.




