ಕೋವಿಡ್ ಹೆಚ್ಚಳ, ಡಬ್ಲ್ಯುಎಚ್‌ಒ ಕಳವಳ

ವಾಷಿಂಗ್ಟನ್: ಜಾಗತಿಕವಾಗಿ ಮತ್ತೆ ಕೋವಿಡ್ ಸೋಂಕು ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್‌ಒ), ಈ ಬೆಳವಣಿಗೆ ಹೀಗೆ ಮುಂದುವರಿದರೆ ವಿಶ್ವದ ಹಲವು ದೇಶಗಳಲ್ಲಿ ಮತ್ತೊಂದು ಸುತ್ತಿನ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
ಜಾಗತಿಕವಾಗಿ ಸತತ ಒಂಬತ್ತು ವಾರಗಳಿಂದ ಇಳಿಕೆ ಕಂಡಿದ್ದ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ, ಕಳೆದ ವಾರ ಶೇ 10ರಷ್ಟು ಏರಿಕೆಯಾಗಿದೆ. ಸುಮಾರು 30 ಲಕ್ಷ ಜನರಿಗೆ ಸೋಂಕು ತಗುಲಿದೆ. ಬ್ರೆಜಿಲ್, ಭಾರತ, ಇಂಡೋನೇಷ್ಯಾ ಮತ್ತು ಬ್ರಿಟನ್ನಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ ಎಂದು ಸಂಘಟನೆಯು ಬುಧವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ. ಈ ವರದಿ ಪ್ರಕಾರ, ಕಳೆದ ವಾರ ಜಾಗತಿಕವಾಗಿ ಕೊರೊನಾ ಸೋಂಕಿನಿ0ದ ಸುಮಾರು 55 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆಯಲ್ಲೂ ಶೇ. 3 ರಷ್ಟು ಏರಿಕೆಯಾಗಿದೆ.
ಕಡಿಮೆ ಜನರಿಗೆ ಕೋವಿಡ್ ಲಸಿಕೆ ನೀಡಿರುವ, ಮಾಸ್ಕ್ ಧರಿಸುವುದು ಸೇರಿದಂತೆ ಕೊರೊನಾ ನಿಯಮಗಳನ್ನು ಪಾಲಿಸದ ಪ್ರದೇಶಗಳಲ್ಲಿ ಕೊರೊನಾ ಸಾಂಕ್ರಾಮಿಕದ ಡೆಲ್ಟಾ ರೂಪಾಂತರ ಸೋಂಕು ಹರಡುತ್ತಿದೆ. ಸದ್ಯ ವಿಶ್ವದ 111 ರಾಷ್ಟ್ರಗಳಲ್ಲಿ ಡೆಲ್ಟಾ ರೂಪಾಂತರ ಸೋಂಕು ಹರಡಿದ್ದು, ಮುಂದಿನ ತಿಂಗಳುಗಳಲ್ಲಿ ಇದು ಪ್ರಬಲ ರೂಪಾಂತರ ತಳಿಯಾಗುವ ಸಾಧ್ಯತೆ ಇದೆ ಎಂದು ಡಬ್ಲ್ಯುಎಚ್‌ಒ ಎಚ್ಚರಿಸಿದೆ.

Latest Indian news

Popular Stories