
ಬೀದರ್: ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ
ಬೀದರ್: ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಿದರೆ ಉತ್ತಮ ನಾಯಕರಾಗಿ ಬೆಳೆಯಬಹುದು ಎಂದು ಉತ್ತರ ಕನ್ನಡದ ತ್ಯಾಗಲಿ ಗ್ರಾಮ ಪಂಚಾಯತಿ ಸದಸ್ಯ ವೆಂಕಟ್ರಮಣ ಹೆಗಡೆ ಶಿಂಗು ಹೇಳಿದರು.
ನೌಬಾದನಲ್ಲಿರುವ ಡಾ ಗುರುಪಾದಪ್ಪಾ ನಾಗಮಾರಪಳ್ಳಿ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ರಿಲಯನ್ಸ್ ಫೌಂಡೇಶನ್ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ಸದಸ್ಯರ ಸಾಮಥ್ರ್ಯವೃದ್ದಿ ತರಬೇತಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಜನರ ಸೇವಕರಾಗಿದ್ದು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯತ ಸದಸ್ಯರಾಗಿರುವವರು ಗ್ರಾಮದ ತನ್ನ ವಾರ್ಡ್ನ ಸಮಸ್ಯೆಗಳನ್ನು ತಿಳಿದುಕೊಳ್ಳಬೇಕು. ಸರಕಾರದಿಂದ ಬರುವ ಅನುದಾನದ ಮಾಹಿತಿಹೊಂದಿರಬೇಕು. ಸಂಪನ್ಮೂಲಗಳನ್ನು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಬೇಕು ಎಂದುಅವರು ಕಿವಿಮಾತು ಹೇಳಿದರು.
ಪಂಚಾಯತಿ ಸದಸ್ಯರು ಹೆಚ್ಚಾಗಿ ಕಟ್ಟಡಗಳು, ರಸ್ತೆಗಳು, ನೀರು ಸರಬರಾಜು ಕಾಮಗಾರಿಗಳ ಬಗ್ಗೆಯೇ ನಿಗಾವಹಿಸುತ್ತಿದ್ದು ಅದರ ಜೊತೆಗೆ ಅಂಗನವಾಡಿ ಕೇಂದ್ರಗಳ ಉಸ್ತುವಾರಿ, ಶಾಲೆಗಳ ಹಾಜರಾತಿ ವ್ಯವಸ್ಥೆಗಳ ಬಗ್ಗೆ, ಮಹಿಳೆಯರ ಮೇಲೆ ದೌರ್ಜನ್ಯಗಳ ಬಗ್ಗೆ, ಪಂಚಾಯತ ಆಸ್ತಿಗಳ ಸಮರ್ಪಕ ನಿರ್ವಹಣೆಗಳ ಬಗ್ಗೆಯೂ ಗಮನಹರಿಸಬೇಕು ಎಂದರು.
ಜನರಲ್ಲಿ ಅರಿವು ಮೂಡುಸುವಿಕೆ, ಸ್ವಚ್ಚ ಭಾರತದ ಪರಿಕಲ್ಪನೆ, ಹಾಲಿ ಇರುವ ವ್ಯವಸ್ಥೆಗಳ ಸಮರ್ಪಕ ನಿರ್ವಹಣೆ ಕೂಡಾ ಇಂದು ಸವಾಲಿನ ಕೆಲಸವಾಗಿದೆ. ಇದಕ್ಕಾಗಿ ಪಂಚಾಯತ ಸದಸ್ಯರು ಜನರ ಒಡನಾಟದಲ್ಲಿದ್ದು ಅರಿವು ಮೂಡಿಸುವ ಕೆಲಸ ಮಾಡಬೇಕು. ಪಂಚಾಯತ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಉಪಸಮಿತಿಗಳ ಬಗ್ಗೆಯೂ ಗಮನ ನೀಡಬೇಕು. ಸ್ಥಾಯಿ ಸಮಿತಿಗಳಲ್ಲಿ ಸದಸ್ಯರಾಗಿ ಜವಾಬ್ದಾರಿಯಿಂದ ಕೆಲಸ ಮಾಡಬೇಕುಎಂದು ಹೇಳಿದರು.
ಬಾಗಲಕೋಟೆಯ ನೀರಬೂದಿಹಾಳದ ಅನಿಲ ಕುಮಾರ ದೆಸಾಯಿ ಅವರು ಮಾತನಾಡಿ, ನೂತನವಾಗಿ ಆಯ್ಕೆಯಾದ ಸದಸ್ಯರು ತರಬೇತಿಗಳ ಮೂಲಕ ಆತ್ಮವಿಶ್ವಾಸ ಬೆಳೆಸಿಕೊಂಡು ಆಡಳಿತ ವ್ಯವಸ್ಥೆಯಲ್ಲಿ ಸಕ್ರಿಯರಾಗಿ ಪಾಲುಗೊಳ್ಳಬೇಕು ಎಂದು ಸಲಹೆ ನೀಡಿದರು.
ಸುಂಧಾಳ ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀದೇವಿ ಮತ್ತು ಸದಸ್ಯೆ ಜಗದೇವಿ, ಸಂಪನ್ಮೂಲ ವ್ಯಕ್ತಿ ರಿಲಯನ್ಸ್ ಫೌಂಡೇಶನ್ ಯೋಜನಾಧಿಕಾರಿ ರಾಮಚಂದ್ರ ಶೇರಿಕಾರ ಮತ್ತಿತರರು ಇದ್ದರು.
ಸಹಾರ್ದ ನಿರ್ದೇಶಕ ಸುಬ್ರಮಣ್ಯ ಪ್ರಭು, ಸ್ವಾಗತಿಸಿದರು. ಎಸ್ಜಿ ಪಾಟೀಲ ವಂದಿಸಿದರು.




