ಜಾತಿ ನಿಂದನೆ | ದೇವಸ್ಥಾನ ಪ್ರವೇಶ ನಿರ್ಬಂಧ; ಫಿಲ್ಟರ್‌ ಆಪರೇಟರ್‌ ವಿರುದ್ಧ ಆಕ್ರೋಶ

ಕುಷ್ಟಗಿ: ತಾಲೂಕಿನ ಟಕ್ಕಳಕಿ‌ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಗ್ರಾಮದ ಫಿಲ್ಟರ್ ಆಪರೇಟರ್ ಸಮುದಾಯವೊಂದಕ್ಕೆ ಜಾತಿ ನಿಂದನೆ ನಡೆಸಿ, ಅಸ್ಪೃಶ್ಯತೆ ಕಾರಣದಿಂದ ದೇವಸ್ಥಾನ ಪ್ರವೇಶ ನಿರ್ಬಂಧಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಗ್ರಾಮದ ಫಿಲ್ಟರ್ ಆಪರೇಟರ್ ಭರಮಗೌಡ ಮಾಲಿಪಾಟೀಲ ಕಳೆದ ಒಂದು ವರ್ಷದಿಂದ ಶುದ್ದ ನೀರು ಘಟಕದ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ದಲಿತ ಸಮುದಾಯಕ್ಕೆ ನೀರು ತೆಗೆದುಕೊಳ್ಳಲು ಬರಬೇಡಿ, ಬಂದರೆ ಮೈಲಿಗೆ ಆಗುತ್ತದೆ ಎಂದು ಜಾತೀಯವಾಗಿ ತುಚ್ಚ ಭಾವನೆಯಿಂದ ನಿಂದಿಸುತ್ತಿದ್ದಾನೆ. ದಲಿತ ಸಮುದಾಯದ ಮಹಿಳೆಯರು, ಹಿರಿಯರಿಗೂ ಅಗೌರವಯುತವಾಗಿ ನಡೆದುಕೊಳ್ಳುತ್ತಿದ್ದಾನೆ ಎಂದು ವರದಿಯಾಗಿದೆ.

ಅಹಿತಕರ ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕುಷ್ಟಗಿ ಮಾದಿಗ ಸಮುದಾಯದ ಹಿರಿಯರು ಬುದ್ದಿವಾದ ಹೇಳಿದರೂ ನಡವಳಿಕೆ ಸರಿಪಡಿಸಿಕೊಂಡಿಲ್ಲ. ಈತನ ಕುಮ್ಮಕ್ಕಿನಿಂದ ಟಕ್ಕಳಕಿ ಗ್ರಾಮದ ದೇವಾಲಯ ಪ್ರವೇಶ ನಿರ್ಭಂಧಿಸಿದ್ದಾನೆ.

ಅಲ್ಲದೇ ದಲಿತ ಸಮುದಾಯ ವಾಸವಿರುವ ವಾರ್ಡಗೆ ಕುಡಿಯುವ ನೀರಿನ ಪೈಪ ಲೈನ್ ತಡೆ ಹಿಡಿಯುವ ಪ್ರಯತ್ನ ಮಾಡಿದ್ದಾನೆ. ಈ ರೀತಿಯ ಮನೋಭಾವನೆಯುಳ್ಳ‌ ಮನಸ್ಸಿನ ವ್ಯಕ್ತಿಯ ವಿರುದ್ದ ಕಾನೂನು ಕ್ರಮ ಜರುಗಿಸಿ ಅಸ್ಪೃಶ್ಯತೆ ಜೀವಂತವಾಗಿರಿಸಿದ ಈ ವ್ಯಕ್ತಿ ಹಾಗೂ ಸಂಗಡಿಗರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಜಾಂಬವ ಯುವ ಸೇನೆ ತಹಶೀಲ್ದಾರ ಶ್ರುತಿ ಮಳ್ಳಪ್ಪಗೌಡ್ರು ಹಾಗೂ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ ಎಂದು‌ ಜಾಂಬವ ಯುವ ಸೇನೆಯ ಯಮನೂರು ಮೇಲಿನಮನಿ, ಶರಣು ತೆಗ್ಗಿಹಾಳ, ಮಹಾಂತೇಶ ಬಾದಿಮಿನಾಳ, ಯಲ್ಲಪ್ಪ ತುಮರಿಕೊಪ್ಪ ತಿಳಿಸಿದ್ದಾರೆ.

Latest Indian news

Popular Stories