
ಮತ್ತೆ ಸಚಿವರ ಖಾತೆ ಬದಲಿಸಿದ ಮುಖ್ಯಮಂತ್ರಿ !
ಬೆಂಗಳೂರು,ಜ.25:- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೆಲ ಸಚಿವರ ಖಾತೆಗಳನ್ನು ಮತ್ತೆ ಬದಲಾವಣೆ ಮಾಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವೇಳೆ ಕೆಲ ಸಚಿವರ ಖಾತೆಗಳನ್ನು ಬದಲಾವಣೆ ಮಾಡಲಾಗಿತ್ತು. ಖಾತೆ ಬದಲಾವಣೆ ವಿರುದ್ಧ ಕೆಲ ಸಚಿವರು ಅಪಸ್ವರ ಎತ್ತಿದ್ದರು. ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದರು. ಇದಾದ ನಂತರ ಮತ್ತೆ ಖಾತೆ ಬದಲಾವಣೆ ಮಾಡಲಾಗಿದೆ.
ಸಚಿವ ಸಂಪುಟ ವಿಸ್ತರಣೆ ವೇಳೆ ಡಾ. ಸುಧಾಕರ್ ಅವರ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಸಚಿವ ಮಾಧುಸ್ವಾಮಿ ಅವರಿಗೆ ನೀಡಲಾಗಿತ್ತು. ಆರೋಗ್ಯ ಮತ್ತು ವೈದ್ಯಕೀಯ ಶೀಕ್ಷಣ ಖಾತೆ ನಡುವೆ ಸಂಬಂಧ ಇರುವುದರಿಂದ ಎರಡೂ ಖಾತೆ ಒಬ್ಬರ ಬಳಿ ಇದ್ದರೆ ಚೆನ್ನ ಎನ್ನುವ ಮೂಲಕ ಸಚಿವ ಡಾ. ಸುಧಾಕರ್ ಅತೃಪ್ತಿ ವ್ಯಕ್ತಪಡಿಸಿದ್ದರು.
ಇದೀಗ ಮಾಧುಸ್ವಾಮಿ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಪುನ: ಡಾ. ಸುಧಾಕರ್ ಅವರಿಗೆ ನೀಡಲಾಗಿದೆ.
ವೈದ್ಯಕೀಯ ಶಿಕ್ಷಣ ಖಾತೆ ಕುರಿತು ಮಾಧುಸ್ವಾಮಿ ಅತೃಪ್ತಿ ವ್ಯಕ್ತಪಡಿಸಿದ್ದರು. ನಾನು ಗ್ರಾಮೀಣ ಭಾಗದಿಂದ ಬಂದವನು ವೈದ್ಯಕೀಯ ಶಿಕ್ಷಣ ಖಾತೆಯಿಂದ ಜನರ ಕೆಲಸ ಹೇಗೆ ಮಾಡಿಕೊಡಲಿ ಎನ್ನುವ ಮೂಲಕ ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಆನಂದಸಿಂಗ್ ಅವರ ಖಾತೆಯೂ ಎರಡು ಬಾರಿ ಬದಲಾಗಿದೆ. ಮುಂಚೆ ಆನಂದಸಿಂಗ್ ಬಳಿ ಪರಿಸರ ಖಾತೆ ಇತ್ತು. ಅದನ್ನೀಗ ಮಾಧುಸ್ವಾಮಿ ಅವರಿಗೆ ಕೊಡಲಾಗಿದೆ. ಸಿಎಂ ಬಳಿ ಇದ್ದ ಮೂಲಸೌಕರ್ಯ ಖಾತೆ ಹಾಗೂ ಮಾಧುಸ್ವಾಮಿ ಬಳಿ ಇದ್ದ ಹಜ್ ಮತ್ತು ವಕ್ಫ್ ಖಾತೆಯನ್ನು ಆನಂದಸಿಂಗ್‍ಗೆ ನೀಡಲಾಗಿದೆ. ಖಾತೆ ಬದಲಾವಣೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.




