ಬೆಳ್ತಂಗಡಿ: ಆರೋಪಿಗಳ ಬಿಡುಗಡೆಗೆ ಆಗ್ರಹಿಸಿ ಪೊಲೀಸ್ ಠಾಣೆಯಲ್ಲೇ ಧರಣಿ ಕುಳಿತ ಶಾಸಕ ಹರೀಶ್ ಪೂಂಜಾ;ಇವರು ಯಾವ ಪ್ರಕರಣದ ಆರೋಪಿಗಳು ಗೊತ್ತಾ?

ಬೆಳ್ತಂಗಡಿ: ಅಕ್ರಮ ಕಲ್ಲು ಗಣಿಕಾರಿಕೆ ಹಿನ್ನೆಲೆಯಲ್ಲಿ ಬಂಧಿತರಾಗಿದ್ದರೆನ್ನಲಾದ ಬಿಜೆಪಿ ಬೆಳ್ತಂಗಡಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್‌ ಶೆಟ್ಟಿ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದು, ಈ ಹಿನ್ನೆಲೆಯಲ್ಲಿ ಶಾಸಕ ಹರೀಶ್ ಪೂಂಜಾ ತಮ್ಮ ಬೆಂಬಲಿಗರೊಂದಿಗೆ ಶನಿವಾರ ರಾತ್ರಿ ಬೆಳ್ತಂಗಡಿ ಠಾಣೆಯಲ್ಲಿ ಧರಣಿ ಕುಳಿತ ಘಟನೆ ನಡೆದಿದೆ.

ಇಲ್ಲಿನ ಮೆಲಂತಬೆಟ್ಟು ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಕ್ವಾರೆಗೆ ಶನಿವಾರ ಸಂಜೆ ಬೆಳ್ತಂಗಡಿ ತಹಶೀಲ್ದಾರ್ ಮತ್ತು ಬೆಳ್ತಂಗಡಿ ಪೊಲೀಸ್ ತಂಡ ಜಂಟಿಯಾಗಿ ದಾಳಿ ನಡೆಸಿ ಸ್ಫೋಟಕಗಳು ಸೇರಿದಂತೆ ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ಕಲ್ಲು ಕ್ವಾರೆ ನಡೆಸುತ್ತಿದ್ದ ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್‌ ಶೆಟ್ಟಿ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ.

ಆದ್ದರಿಂದ ರಾತ್ರಿಯೇ ಸ್ಟೇಷನ್ ಗೆ ಧಾವಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿ ಬಂಧಿತ ಶಶಿರಾಜ್ ಶೆಟ್ಟಿಯನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

ಮೇಲಂತಬೆಟ್ಟು ಮೂಡಲ ನಿವಾಸಿ ಸೂರಪ್ಪ ಪೂಜಾರಿ ಎಂಬವರ ಜಾಗದಲ್ಲಿ ಈ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು ಎನ್ನಲಾಗಿದೆ.
ಬಿಜೆಪಿ ಮುಖಂಡ ಪ್ರಮೋದ್ ದಿಡುಪೆ ಹಾಗೂ ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ನಡೆಸುತ್ತಿದ್ದರೆಂದು ಹೇಳಲಾಗಿದೆ. ಈ ಕಲ್ಲಿನ ಕ್ವಾರಿ ಯಾವುದೇ ಸಮರ್ಪಕವಾದ ದಾಖಲೆಗಳಿಲ್ಲದೇ ಕಾರ್ಯಾಚರಿಸುತ್ತಿತ್ತು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶಶಿರಾಜ್‌ ಶೆಟ್ಟಿಯನ್ನು ಬಂಧಿಸಿದ್ದಾರೆ.

ದಾಳಿಯ ವೇಳೆ ಒಂದು ಹಿಟಾಚಿ, ಒಂದು ಕಂಪ್ರೆಸರ್ ಮೆಷಿನ್, ಒಂದು ಕಾರು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories