Crime

ಇನ್ನೊಂದು ತಿಂಗಳಲ್ಲಿ ವೈದ್ಯರ ನೇಮಕ: ಸುಧಾಕರ್

ಬೆಂಗಳೂರು, 4: ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇನ್ನೊಂದು ತಿಂಗಳಲ್ಲಿ ವೈದ್ಯರ ನೇಮಕಾತಿ ನಡೆಯಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿಧಾನಸಭೆಯಲ್ಲಿಂದು ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರು ಮತ್ತು ಇತರ ಸಿಬ್ಬಂದಿ ಭರ್ತಿಗೆ ಕ್ರಮಕೈಗೊಳ್ಳಲಾಗಿದೆ. ಬಹಳ ವರ್ಷಗಳ ನಂತರ ಇದೇ ಮೊದಲ ಬಾರಿಗೆ 1246 ಸಾಮಾನ್ಯ ಕರ್ತವ್ಯ ವೈದ್ಯರು ಮತ್ತು 824 ತಜ್ಞ ವೈದ್ಯರ ನೇಮಕಾತಿಯನ್ನು ಒಂದು ತಿಂಗಳೊಳಗೆ ಮಾಡಲಾಗುವುದು. ಇದು ಜಾರಿಗೊಂಡರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇರುವುದಿಲ್ಲ. ಇನ್ನಿತರ ಸಿಬ್ಬಂದಿಯನ್ನು 3-4 ತಿಂಗಳಲ್ಲಿ ನೇಮಕ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.
ಹೊಸದಾಗಿ 49 ತಾಲೂಕುಗಳನ್ನು ಘೋಷಣೆ ಮಾಡಲಾಗಿದೆ. ಈ ಹೊಸ ತಾಲೂಕುಗಳಲ್ಲಿ ತಾಲೂಕು ಆಸ್ಪತ್ರೆಗಳ ಕಟ್ಟಡ ನಿರ್ಮಾಣಕ್ಕೆ ಹಣಕಾಸು ಇಲಾಖೆ ಅನುದಾನ ಒದಗಿಸಬೇಕಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಸ್ತುತ ರಾಜ್ಯದಲ್ಲಿ ಒಂದು ಲಕ್ಷ ಜನಸಂಖ್ಯೆಗೆ ಒಂದರಂತೆ ಆಂಬುಲೆನ್ಸ್ ಇದೆ. ಇದನ್ನು ಈ ವರ್ಷ ಪ್ರತಿ ಪ್ರಾಥಮಿಕ ಕೇಂದ್ರದ ಜನಸಂಖ್ಯೆಗೆ ಅನುಗುಣವಾಗಿ ಅಂದರೆ ಸುಮಾರು 30ರಿಂದ 35 ಸಾವಿರ ಜನಸಂಖ್ಯೆಗೆ ಒಂದರಂತೆ ಒಂದು ಆಂಬುಲೆನ್ಸ್ ವ್ಯವಸ್ಥೆ ಮಾಡಲು ಚರ್ಚೆ ನಡೆಯುತ್ತಿದೆ. ಆಂಬುಲೆನ್ಸ್ ಸೇವೆಯನ್ನು ಉತ್ಕøಷ್ಟ ರೀತಿಯಲ್ಲಿ ಒದಗಿಸಲು ಸರ್ಕಾರ ಮುಂದಾಗಿದೆ. ಮುಂದಿನ ದಿನಗಳಲ್ಲಿ ಆಂಬುಲೆನ್ಸ್ ಸೇವೆಯ ಜೊತೆಗೆ ಸುಮಾರು 12 ರೀತಿಯ ಸೇವೆಗಳನ್ನು ಒಳಗೊಂಡು ಉತ್ಕೃಷ್ಟ ಸೇವೆ ಜಾರಿಗೆ ಬರಲಿದ್ದು, ಇನ್ನು ಎರಡು ಮೂರು ತಿಂಗಳಲ್ಲಿ ಇದಕ್ಕಾಗಿ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button