
Crime
ಡ್ರಗ್ಸ್ ಪ್ರಕರಣ: ಜಾರಿ ನಿರ್ದೇಶನಾಲಯದ ಮುಂದೆ ಬಿನೀಶ್ ಕೊಡಿಯೇರಿ ಹಾಜರು
ಬೆಂಗಳೂರು, ಅ 6 (ಯುಎನ್ಐ):-ಮಾದಕ ವಸ್ತು ವಶಪಡಿಸಿಕೊಂಡ ಪ್ರಕರಣದಲ್ಲಿ ಆರೋಪಿಗಳೊಂದಿಗಿನ ಸಂಪರ್ಕದ ಆರೋಪದ ಮೇಲೆ ಕೇರಳ ಸಿಪಿಐ (ಎಂ) ನಾಯಕ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿಯನ್ನು ಮಂಗಳವಾರ ಜಾರಿ ನಿರ್ದೇಶನಾಲಯ (ಇಡಿ) ಮುಂದೆ ಹಾಜರುಪಡಿಸಲಾಗಿತ್ತು.
ಮಾದಕವಸ್ತು ಪ್ರಕರಣದಲ್ಲಿ ಮಾದಕ ವಸ್ತು ನಿಯಂತ್ರಣಾ ಬ್ಯೂರೋ (ಎನ್ಸಿಬಿ)ದಿಂದ ಬಂಧಿಸಲ್ಪಟ್ಟ ಆರೋಪಿಯೊಬ್ಬನೊಂದಿಗೆ ನಂಟು ಹೊಂದಿದ್ದಕ್ಕೆ ಸಂಬಂಧಿಸಿ ತನ್ನ ಮುಂದೆ ಹಾಜರಾಗುವಂತೆ ಇಡಿ ಮಂಗಳವಾರ ಕೊಡಿಯೇರಿಗೆ ನೋಟಿಸ್ ನೀಡಿತ್ತು.
ಮಾದಕ ವಸ್ತು ಹೊಂದಿದ್ದ ಆರೋಪದ ಮೇಲೆ ಎನ್ಸಿಬಿ ಆಗಸ್ಟ್ನಲ್ಲಿ ಬೆಂಗಳೂರಿನಲ್ಲಿ ಡಿ ಅನಿಖಾ, ಆರ್ ರವೀಂದ್ರನ್ ಮತ್ತು ಮೊಹಮ್ಮದ್ ಅನೂಪ್ ನನ್ನು ಬಂಧಿಸಿತ್ತು. ಕನ್ನಡ ಚಲನಚಿತ್ರ ನಟರು ಮತ್ತು ಗಾಯಕರಿಗೆ ಮಾದಕವಸ್ತು ಪೂರೈಸಿದ ಆರೋಪ ಅವರ ಮೇಲಿದೆ.




