
ರಾಷ್ಟ್ರಪಿತನಿಗೆ ಮುಖ್ಯಮಂತ್ರಿ, ಗಣ್ಯರಿಂದ ಗೌರವ
ಬೆಂಗಳೂರು, ಅ.2(ಯುಎನ್ಐ):-ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಅನೇಕ ಗಣ್ಯರು ರಾಷ್ಟ್ರಪಿತನಿಗೆ ಗೌರವ ಸಲ್ಲಿಸಿದ್ದಾರೆ.
ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಸತ್ಯ, ಅಹಿಂಸೆಗಳ ಬೆಳಕಿನಲ್ಲಿ ಸತ್ಯಾಗ್ರಹದ ದಾರಿಯಲ್ಲಿ ನಡೆದು ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜಯಂತಿಯಂದು ಅವರಿಗೆ ನಮ್ಮ ಅನಂತ ನಮನಗಳನ್ನು ಸಲ್ಲಿಸೋಣ’ ಎಂದು ತಿಳಿಸಿದ್ದಾರೆ.
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ಬಿಡುಗಡೆ ಮಾಡಿದ್ದು, ಸತ್ಯ ಮತ್ತು ಅಹಿಂಸಾತ್ಮಕ ಹೋರಾಟದ ಮೂಲಕ ಜಗತ್ತಿಗೆ ಹೊಸ ಬೆಳಕು ನೀಡಿದ ರಾಷ್ಟ್ರಪಿತ ಮಹಾತ್ಮ ಮೋಹನ್ ದಾಸ್ ಗಾಂಧಿ ಹಾಗೂ ಸರಳ ವ್ಯಕ್ತಿತ್ವ, ದೃಢ ನಿರ್ಧಾರದ ಮೂಲಕ ನಮ್ಮ ಮನಸ್ಸಿನಲ್ಲಿ ನೆಲೆಸಿರುವ ಭಾರತದ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಈ ಘಳಿಗೆಯಲ್ಲಿ ಇಬ್ಬರೂ ನೇತಾರರಿಗೆ ನನ್ನ ಪ್ರಣಾಮಗಳು. ಮಹಾತ್ಮ ಗಾಂಧಿಯವರು ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಭರತ ಭೂಮಿ ಕಂಡ ಶ್ರೇಷ್ಠ ಮಹಾಪುರುಷರು. ಇವರ ಆದರ್ಶಪ್ರಾಯವಾದ ಜೀವನ, ನಮಗೆಲ್ಲ ಮಾದರಿ. ಈ ಇಬ್ಬರು ಮಹಾಪುರುಷರನ್ನು ಸದಾ ಸ್ಮರಿಸೋಣ, ಜೈ ಜವಾನ್ ಜೈ ಕಿಸಾನ್ ಎಂದು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ, ಸತ್ಯ, ಅಹಿಂಸೆ, ನೈತಿಕತೆ ಮತ್ತು ಸರಳತೆಯ ಹಾದಿ ಸುಗಮ ಅಲ್ಲ, ಮಹಾತ್ಮಗಾಂಧೀಜಿಯವರು ಆ ಹಾದಿಯಲ್ಲಿ ನಡೆದು ಗುರಿ ಮುಟ್ಟಬಹುದೆಂದು ತೋರಿಸಿಕೊಟ್ಟಿದ್ದಾರೆ. ನಾವೂ ಗಾಂಧಿ ಮಾರ್ಗದ ಪಥಿಕರಾಗೋಣ ಎಂದು ಗಾಂಧಿ ಜಯಂತಿಯ ಸಂದರ್ಭದಲ್ಲಿ ಶಪಥ ಮಾಡೋಣ ಎಂದು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸತ್ಯ ಮತ್ತು ಅಹಿಂಸಾತ್ಮಕ ಹೋರಾಟದ ಮೂಲಕ ಜಗಕೆ ಹೊಸ ಹೊಳಹು ನೀಡಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಸರಳ ವ್ಯಕ್ತಿತ್ವ, ದೃಢ ನಿರ್ಧಾರದ ಮಾಜಿ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಅವರ ಜನ್ಮ ದಿನದ ಶುಭಾಶಯಗಳು. ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವ ಈ ಮಹಾ ಪುರುಷರ ಬದುಕಿನ ತತ್ವ, ಆದರ್ಶಗಳು ಹಾಗೂ ಮಾದರಿ ಬದುಕು ಸರ್ವಕಾಲಕ್ಕೂ ಅನುಕರಣೀಯ. ಅವರ ಹುಟ್ಟುಹಬ್ಬದ ದಿನವಾದ ಇಂದು ಅವರನ್ನು ವಿನಮ್ರವಾಗಿ ಸ್ಮರಿಸಿಕೊಳ್ಳುತ್ತೇನೆ. ಈ ಮಹಾಚೇತನಗಳ ಸಾಮಾಜಿಕ ಬದ್ಧತೆ, ಜೀವನ ಮತ್ತು ಮಾದರಿ ವ್ಯಕ್ತಿತ್ವ ನಮ್ಮೆಲ್ಲರಿಗೂ ಸ್ಫೂರ್ತಿಯ ಸೆಲೆ. ಅವರ ಸತ್ಯದ ಹಾದಿ ಮತ್ತು ಪ್ರಾಮಾಣಿಕತೆ ನಮ್ಮೆಲ್ಲರಿಗೂ ದೀವಿಗೆ ಎಂದು ಕುಮಾರಸ್ವಾಮಿ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಸತ್ಯಾಗ್ರಹದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಅತ್ಯಂತ ಮುಖ್ಯ ಪಾತ್ರ ವಹಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನ್ಮ ಜಯಂತಿಯಂದು ಆ ಮಹಾನ್ ನಾಯಕನಿಗೆ ಕೋಟಿ ಕೋಟಿ ನಮನಗಳು. ಬಾಪೂಜಿ ಅವರ ಶ್ರಮ ಜೀವನ, ಗ್ರಾಮ ಸ್ವರಾಜ್ಯ, ಸ್ವಚ್ಛತೆ, ರಾಮ ರಾಜ್ಯದ ಪರಿಕಲ್ಪನೆಗಳು ಸಾರ್ವಕಾಲಿಕ ತತ್ವಾದರ್ಶಗಳಾಗಿದ್ದು ಅವರ ಹಾದಿಯಲ್ಲಿ ಮುನ್ನಡೆಯೋಣ ಎಂದು ಟ್ವಿಟ್ ಮಾಡಿದ್ದಾರೆ.
ಆರೋಗ್ಯ ಸಚಿವ ಬಿ.ಶ್ರೀರಾಮುಲು, ಮಹಾತ್ಮ ಗಾಂಧಿ ಜಯಂತಿ ಶುಭಾಶಯಗಳು, ಭಾರತದ ಸ್ವಾತಂತ್ರ್ಯ ಚಳವಳಿಯ ಹರಿಕಾರ, ಪರಕೀಯರ ಆಡಳಿತದಲ್ಲಿದ್ದ ದೇಶಗಳ ಸ್ವಾತಂತ್ರ್ಯ ಚಳುವಳಿಗಳಿಗೆ ಸ್ಫೂರ್ತಿ ಕೊಟ್ಟ ಮಹಾನ್ ನಾಯಕ, ರಾಷ್ಟ್ರಪಿತ ಬಾಪೂಜಿ ಅವರಿಗೆ ನಮನಗಳು ಎಂದು ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.




