
ಬಿಜೆಪಿಗೆ ಅಧಿಕಾರ, ಹಣದ ಮದ: ಮಲ್ಲಿಕಾರ್ಜುನ ಖರ್ಗೆ ಟೀಕೆ
ಬೆಂಗಳೂರು, ಅ.2(ಯುಎನ್ಐ):- ಬಿಜೆಪಿಯವರಿಗೆ ಅಧಿಕಾರ ಮತ್ತು ಹಣದ ಅಹಂ ನೆತ್ತಿಗೇರಿದೆ. ಅಭಿವೃದ್ಧಿಯನ್ನೆ ಮರೆತು ಬಿಟ್ಟಿದ್ದಾರೆ. ಕೇವಲ ದೂಷಣೆಯಲ್ಲೇ ಪ್ರಧಾನಿ ಮೋದಿ ಕಾಲ ಕಳೆಯುತ್ತಿದ್ದಾರೆ ಎಂದು ರಾಜ್ಯ ಸಭಾ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ರಾಷ್ಟ್ರಪಿತ ಮಹಾತ್ಮಗಾಂಧೀಜಿ ಹಾಗೂ ದಿ. ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಅಧಿಕಾರ ಇಂದು ದುಷ್ಟರ ಕೈಯಲ್ಲಿದೆ. ಜೈಜವಾನ್, ಜೈಕಿಸಾನ್ ಮರೆಯಾಗಿ ಮಾರೋ ಕಿಸಾನ್, ಮಾರೋ ಜವಾನ್ ಪ್ರಾರಂಭವಾಗಿದೆ. ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ. ಇದರ ವಿರುದ್ಧ ರೈತರು ರೊಚ್ಚಿಗೇಳುವುದು ನಿಶ್ಚಿತ. ಇದನ್ನು ಪ್ರಧಾನಿ ಮೋದಿ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಮೊದಲು ನೋಟ್ ಬ್ಯಾನ್ ಮಾಡಿ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿದರು. ಈಗ ಲಾಕ್ಡೌನ್ ಮಾಡಿ ಕಾರ್ಮಿಕರ ಜೀವನವನ್ನು ಮೂರಾ ಬಟ್ಟೆ ಮಾಡಿದರು ಎಂದು ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೆಳಜಾತಿಗಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಅದೇ ರೀತಿ ಮಹಿಳೆಯರು, ಅಲ್ಪಸಂಖ್ಯಾತರು, ರೈತರು, ಕಾರ್ಮಿಕರು ಎಲ್ಲರ ಮೇಲೂ ದೌರ್ಜನ್ಯ ಹೆಚ್ಚಾಗಿದೆ. ಇದಕ್ಕೆ ಆರ್ ಎಸ್ ಎಸ್ ಕುಮ್ಮಕ್ಕು ಇದೆ ಎಂದು ಆರೋಪಿಸಿದರು.




