ಗ್ರಾಪಂ ಕಚೇರಿಗಳಲ್ಲಿ ಇನ್ಮುಂದೆ ಜನನ-ಮರಣ ಪ್ರಮಾಣ ಪತ್ರ:ಡಿಸಿ
ಬಳ್ಳಾರಿ, ಸೆ 30: ಗ್ರಾಮ ಪಂಚಾಯತಿ ಮಟ್ಟದಲ್ಲಿ ಹಾಗೂ ಗ್ರಾಪಂ ಕಚೇರಿಗಳಲ್ಲಿ ಇನ್ಮುಂದೆ ಸಾರ್ವಜನಿಕರು ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಜನನ ಮತ್ತು ಮರಣ ನೊಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಪಂ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಜನನ ಮತ್ತು ಮರಣ ಪ್ರಮಾಣ ಪತ್ರಗಳ ವಿತರಣಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಆನ್ಲೈನ್ನಲ್ಲಿ ಜನನ ಮತ್ತು ಮರಣ ನೊಂದಣಿ ವ್ಯವಸ್ಥೆಯು ಜಾರಿಯಲ್ಲಿದ್ದು, ನೊಂದಣಿಯಾದ ದಾಖಲೆಗಳನ್ನು ಸರ್ಕಾರವು ನಿಗದಿ ಪಡಿಸಿದ ದರ ಪಾವತಿಸಿ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಪ್ರಮಾಣ ಪತ್ರವನ್ನು ಪಡೆಯಬಹುದು.
2015ರ ಏ.1ರ ಪೂರ್ವದಲ್ಲಿ ನೋಂದಣಿಯಾದ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ನೊಂದಣಿಯಾದ ತಾಲೂಕು ಕಚೇರಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.
ಗ್ರಾಪಂ ವ್ಯಾಪ್ತಿಯಲ್ಲಿ ನೊಂದಣಿಯಾದ ಜನನ ಮತ್ತು ಮರಣ ಘಟನೆಗಳನ್ನು ಹೆಸರು, ದಿನಾಂಕ, ತಂದೆ, ತಾಯಿಯ ಹೆಸರು ನಮೂದಿಸಿ ಪ್ರಮಾಣ ಪತ್ರಗಳನ್ನು ಹುಡುಕಬಹುದು. ಗ್ರಾಪಂ ವ್ಯಾಪ್ತಿಯ ಹೊರಗಡೆ ನೊಂದಣಿಯಾದ ಜನನ ಮತ್ತು ಮರಣ ಘಟನೆಗಳ ಪ್ರಮಾಣ ಪತ್ರಗಳನ್ನು ಹುಡುಕಲು ನೊಂದಣಿ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು. ಗ್ರಾಪಂಗಳಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರದ ಪ್ರತಿಗಳಿಗೆ ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




