ಮಹಿಳೆ ಬೆತ್ತಲೆಗೊಳಿಸಿ, ಹಲ್ಲೆ ಪ್ರಕರಣ: ಸಂತ್ರಸ್ತೆ ಮನೆಗೆ ಭೇಟಿ, 7 ಮಂದಿ ಬಂಧನ; ಗೃಹ ಸಚಿವ

ಬೆಳಗಾವಿ: ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿರುವ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ 7 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್​ ಅವರು ಹೇಳಿದ್ದಾರೆ.

ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಮಹಿಳೆಯ ಆರೋಗ್ಯವನ್ನು ಗೃಹ ಸಚಿವರು ವಿಚಾರಿಸಿದರು. ಈ ವೇಳೆ ಗೃಹಸಚಿವರೊಂದಿಗೆ ನಗರ ಪೊಲೀಸ್ ಆಯುಕ್ತ ಎಸ್ ಎನ್ ಸಿದ್ದರಾಮಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಜೊತೆಗಿದ್ದರು.

ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಾ. ಜಿ. ಪರಮೇಶ್ವರ್ ಅವರು, 24 ವರ್ಷದ ಯುವಕ ಯುವತಿಯನ್ನು ಜೊತೆಗೆ ಕರೆದುಕೊಂಡು ಹೋಗಿದ್ದಾನೆ. ಹುಡುಗ-ಹುಡುಗಿ ಪ್ರೀತಿಸುತ್ತಿದ್ದರು ಎನ್ನುವ ಮಾಹಿತಿ ಇದೆ. ಇದರಿಂದ ಯುವಕನ ತಾಯಿ ಮೇಲೆ ಹಲ್ಲೆ ಮಾಡಿದ್ದಾರೆ. ಸುಮಾರು 8 ರಿಂದ 10 ಜನ ಹಲ್ಲೆ ಮಾಡಿ ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿದ್ದಾರೆ. ಪೊಲೀಸರಿಗೆ ವಿಷಯ ತಿಳಿದ ಬಳಿಕ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಸದ್ಯ ಅವರಿಗೆ ಚಿಕಿತ್ಸೆ ನಡೆಯುತ್ತಿದೆ. ಪೊಲೀಸರು ಈಗಾಗಲೇ 7 ಜನರನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳನ್ನು ಬಂಧಿಸಬೇಕಿದೆ ಎಂದು ಹೇಳಿದರು.

ಉಳಿದ ಇಬ್ಬರನ್ನೂ ಸಹ ಪೊಲೀಸರು ಬಂಧನಕ್ಕೊಳಪಡಿಸುತ್ತಾರೆ. ಓಡಿ ಹೋಗಿರುವ ಯುವಕ ಯುವತಿಯನ್ನು ಪೊಲೀಸರು ಹುಡುಕಾಡುತ್ತಿದ್ದಾರೆ. ಇಂತಹ ಘಟನೆಗಳು ಆಗಬಾರದು, ಪೊಲೀಸರಿಗೆ ದೂರು ನೀಡಿದ್ದರೆ ಪೊಲೀಸರೇ ಕ್ರಮ ತೆಗೆದುಕೊಳ್ಳುತ್ತಿದ್ದರು. ಊರಲ್ಲಿ ಹಿರಿಯರು ಮಾತನಾಡಿಕೊಂಡು ಬಗೆಹರಿಸಬಹದಿತ್ತು. ಆದರೆ ಇದೊಂದು ಅಮಾನವೀಯ ಘಟನೆ. ಸ್ಥಳಕ್ಕೂ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದರು.

ಇನ್ನು ಜಿಲ್ಲಾಸ್ಪತ್ರೆಯಲ್ಲಿ ಸಂತ್ರಸ್ತ ಮಹಿಳೆಯ ಆರೋಗ್ಯ ವಿಚಾರಿಸಿದ ಬಳಿಕ ಗೃಹ ಸಚಿವರು, ನೇರವಾಗಿ ಮಹಿಳೆಯ ಮನೆಗೆ ಭೇಟಿ ನೀಡಿದರು.

ಈ ವೇಳೆ ಯುವತಿಯ ಜೊತೆ ಓಡಿ ಹೋಗಿರುವ ಯುವಕನ ಅಜ್ಜಿ ಘಟನೆಯ ಬಗ್ಗೆ ಪರಮೇಶ್ವರ್​ ಅವರಿಗೆ ಮಾಹಿತಿ ನೀಡಿದರು.

ಈ ಸಂದರ್ಭ ಸಚಿವರ ಕಾಲಿಗೆ ಬಿದ್ದು ಅಜ್ಜಿ ಕಣ್ಣೀರು ಹಾಕಿ, ಮೈಮೇಲೆ ಇರುವ ಬಂಗಾರವನ್ನು ತೆಗೆದುಕೊಂಡು ಹೋಗಿದ್ದಾರೆ. ಬೆತ್ತಲೆ ಮಾಡಿ, ಹಲ್ಲೆ ಮಾಡಿದ್ದಾರೆ ಎಂದು ಹೇಳಿದರು. ಈ ವೇಳೆ ಅಜ್ಜಿಯನ್ನು ಪರಮೇಶ್ವರ್ ಅವರು ಸಮಾಧಾನಪಡಿಸಲು ಯತ್ನಿಸಿದರು.

ಮಹಿಳೆ ಬೆತ್ತಲೆಗೊಳಿಸಿ, ಹಲ್ಲೆ ಪ್ರಕರಣ: ಹೀನ ಕೃತ್ಯಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ; ಸಿಎಂ ಸಿದ್ದರಾಮಯ್ಯ

ಬೆಳಗಾವಿಯಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ, ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವುದು ಅತ್ಯಂತ ಅಮಾನವೀಯ. ಇದರಿಂದ ಇಡೀ ಸಮಾಜವೇ ತಲೆತಗ್ಗಿಸುವಂತಾಗಿದೆ. ಇಂತಹ ಹೀನ ಕೃತ್ಯಗಳನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿರುವ ಅವರು, ಬೆಳಗಾವಿಯಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ, ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವುದು ಅತ್ಯಂತ ಅಮಾನವೀಯ. ಇದರಿಂದ ಇಡೀ ಸಮಾಜವೇ ತಲೆತಗ್ಗಿಸುವಂತಾಗಿದೆ. ಇಂತಹ ಹೀನ ಕೃತ್ಯಗಳನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಪ್ರಕರಣದ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮವಹಿಸುವ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವ ಸಂಪೂರ್ಣ ಹೊಣೆ ನಮ್ಮದು ಎಂದು ಹೇಳಿದ್ದಾರೆ.

Latest Indian news

Popular Stories