ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಳಿಸಿ ಸಮರ್ಪಕ ನೀರು ಪೂರೈಸಿ: ಡಿಸಿ ಟಿ.ಭೂಬಾಲನ್ ಸೂಚನೆ

ವಿಜಯಪುರ: ವಿಜಯಪುರ ನಗರದ ಕುಡಿಯುವ ನೀರಿನ ಕಾಮಗಾರಿಗಳಿಗೆ ವೇಗ ನೀಡಿ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ ನಗರದ ಎಲ್ಲ ವಾರ್ಡಗಳಿಗೆ ಕುಡಿಯುವ ನೀರು ಪೂರೈಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಹಾಗೂ ಕುಡಿಯುವ ನೀರಿನ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರೊಂದಿಗೆ ಸಭೆ ನಡೆಸಿದ ಅವರು, ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗಬಾರದು. ಕುಡಿಯುವ ನೀರಿನ ಕಾಮಗಾರಿಗಳಿಗೆ ವೇಗ ನೀಡಿ, ಡಿಸೆಂಬರ್ ಅಂತ್ಯದೊಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಿ ಸಮರ್ಪಕವಾಗಿ ಎಲ್ಲ ವಾರ್ಡಗಳಿಗೆ ನೀರು ಪೂರೈಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.

ಕೆಲವೊಂದು ಕಡೆಗಳಲ್ಲಿ ಒಂದು ವಾರದ ನಂತರ ನೀರು ಸರಬರಾಜು ಮಾಡಲಾಗುತ್ತಿರುವ ಕುರಿತು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು ಎಲ್ಲ ವಾರ್ಡಗಳಲ್ಲಿ ನಿರಂತರವಾಗಿ ಕುಡಿಯುವ ನೀರು ಸರಬರಾಜುವಿಗೆ ಕ್ರಮ ವಹಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಮರ್ಪಕವಾಗಿ ನೀರು ಪೂರೈಸುವ ಹಿನ್ನಲೆಯಲ್ಲಿ ಅವಶ್ಯಕತೆಗಿಂತ ಹೆಚ್ಚಾಗಿ ನೀರು ಪೋಲಾಗುತ್ತಿರುವ ಕಂಡು ಬಂದಿದ್ದು, ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯಿಂದ ಜಾಗೃತ ದಳ ತಂಡವನ್ನು ರಚಿಸಿಕೊಂಡು ಸಾರ್ವಜನಿಕರಿಗೆ ನೀರು ಪೋಲು ಮಾಡದಂತೆ ತಿಳುವಳಿಕೆ ನೀಡಬೇಕು. ಅದ್ಯಾಗ್ಯೂ ಅನಾವಶ್ಯಕವಾಗಿ ನೀರು ಪೋಲು ಮಾಡಿದ್ದಲ್ಲಿ ಅಂತಹವರಿಗೆ ನಳ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆ ನೀಡಿ, ನೀರು ಪೋಲಾಗುವುದನ್ನು ತಡೆಗಟುವಂತೆ ಸೂಚಿಸಿದ ಅವರು, ಸಾರ್ವಜನಿಕರು ಸಹ ನೀರು ಅಮೂಲ್ಯವಾಗಿದ್ದು, ಅದನ್ನು ಪೋಲು ಮಾಡದೇ ಅವಶ್ಯಕ ಇರುವರಿಗೆ ಪೂರೈಸಬೇಕಾಗಿರುವುದರಿಂದ ಅವಶ್ಯಕತೆಯನುಸಾರ ನೀರು ಪಡೆದುಕೊಂಡು ಜಲಮಂಡಳಿಯೊAದಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.

ಕರ್ನಾಟಕ ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳನ್ನೊಳಗೊಂಡ ತಂಡ ವಿಜಯಪುರ ನಗರದ 35 ವಾರ್ಡಗಳಲ್ಲಿ ಜನಜಾಗೃತಿ ಆಂದೋಲನ ಹಮ್ಮಿಕೊಂಡು ನೀರು ಪೋಲು ಮಾಡದಂತೆ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸಬೇಕು. ನೀರಿನ ಶುಲ್ಕ ಪಾವತಿಗೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯ ಬರಪೀಡಿತ ಎಂದು ಈಗಾಗಲೇ ಘೋಷಿಸಲಾಗಿದೆ. ಮುಂಬರುವ ಬೇಸಿಗೆಯನ್ನು ಗಮನದಲ್ಲಿಟ್ಟುಕೊಂಡು ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ಬಾರದಂತೆ ಈಗಿನಿಂದಲೇ ಅವಶ್ಯಕ ಪೂರ್ವಸಿದ್ಧತೆ ಕೈಗೊಂಡು ಮುಂಬರುವ ದಿನಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಭೂತನಾಳ ಕೆರೆಯಲ್ಲಿರುವ ನೀರಿನ ಪ್ರಮಾಣವನ್ನು ಗಮನಿಸಿ, ಬೇಸಿಗೆಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಲು ಪರ್ಯಾಯವಾಗಿ ನೀರಿನ ಲಭ್ಯತೆಯನ್ನು ಗುರುತಿಸಿಟ್ಟುಕೊಳ್ಳಬೇಕು. ಕೃಷ್ಣಾ ಜಲಾಶಯದಿಂದ ನೀರು ಬಿಡುವ ವ್ಯವಸ್ಥೆ ಸೇರಿದಂತೆ ಪರ್ಯಾಯವಾಗಿ ಕೊಳವೆ ಬಾವಿಗಳನ್ನು ಗುರುತಿಸಿಟ್ಟುಕೊಂಡು ಕುಡಿಯುವ ನೀರು ಪೂರೈಕೆಗೆ ಸನ್ನದ್ಧರಾಗಿರುವಂತೆ ಅವರು ಸೂಚನೆ ನೀಡಿದರು.
ವಿಜಯಪುರ ನಗರದ 1ನೇ ಹಂತದ ಕುಡಿಯುವ ನೀರಿನ ಯೋಜನೆಯ ಬಾಗಲಕೊಟೆ ರಸ್ತೆಯಲ್ಲಿರುವ ಹೊನಗನಹಳ್ಳಿಯ ರೇಲ್ವೆ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಕುಡಿಯುವ ನೀರು ಪೂರೈಸುವ ಪೈಪಲೈನ್ ಕಡಿತಗೊಳಿಸಿದ್ದು, ಡಿಸೆಂಬರ್ ಅಂತ್ಯದೊಳಗಾಗಿ ದುರಸ್ತಿಗೊಳಿಸಿ ಪುನ: ಜೋಡಣೆ ಮಾಡಲು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ಗುತ್ತಿಗೆದಾರರಿಗೆ ಅವರು ಸೂಚನೆ ನೀಡಿದರು.

ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಬದ್ರೂದ್ದಿನ ಸೌದಾಗರ, ವಿಜಯಪುರ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಜಲಂಡಳಿ ಕಾರ್ಯಪಾಲಕ ಅಭಿಯಂತರ ಎಸ್.ಎಸ್.ಪಟ್ಟಣಶೆಟ್ಟಿ, ಮಹಾನಗರ ಪಾಲಿಕೆಯ ಅಧೀಕ್ಷಯ ಅಭಿಯಂತರ ವಿ.ಎಂ.ಹಿರೇಮಠ, ಕಾರ್ಯನಿರ್ವಾಹಕ ಅಭಿಯಂತರ ಎಂ.ಎಲ್.ಪಡಗಾನೂರ, ವಿಠ್ಠಲ ಹೊನ್ನಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Latest Indian news

Popular Stories