Crime

ಸೊಸೈಟಿ ಸಿಬ್ಬಂಧಿಗಳ ಸೇವಾ ಭದ್ರತೆ ಕಾರ್ಯ ಅನುಷ್ಠಾನಕ್ಕೆ ಸರ್ಕಾರ ಬದ್ಧ: ಸಚಿವ ಕೆ.ಎನ್.ರಾಜಣ್ಣ

ವಿಜಯಪುರ : ಸಹಕಾರ ಪತ್ತಿನ ಸಂಘ ಹಾಗೂ ಹಾಲಿನ ಸೊಸೈಟಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಶೀಘ್ರವೇ ಈ ಸೇವಾ ಭದ್ರತೆ ಒದಗಿಸುವ ಕಾರ್ಯವನ್ನು ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಘೋಷಿಸಿದರು.

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆವರಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಸಹಕಾರ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ 70 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ಹಾಗೂ ವಿಜಯಪುರ ಡಿಸಿಸಿ ಬ್ಯಾಂಕ್ ಶತಮಾನೋತ್ಸವ ಭವನ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಸಹಕಾರ ಆಂದೋಲನ ಗಟ್ಟಿಗೊಳಿಸಲು, ಸಹಕಾರ ವಲಯವನ್ನು ಇನ್ನಷ್ಟೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಮಾಜಿ ಸಚಿವ ಲಕ್ಷ್ಮಣ ಸವದಿ, ಜಿ.ಟಿ. ದೇವೆಗೌಡರನ್ನೊಳಗೊಂಡ ಹಿರಿಯ ಸಮಿತಿ ರಚಿಸಲಾಗಿದೆ, ಸಹಕಾರಿ ಆಂದೋಲನವನ್ನು ಜನರ ಆಂದೋಲನವನ್ನಾಗಿಸುವ ಸಂಕಲ್ಪವನ್ನು ಸಾಕಾರಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದರು. ಈ ಹಿಂದೆ ಯಶಸ್ವಿನಿ ಯೋಜನೆ ನಿಂತು ಹೋಗಿತ್ತು, ಅನೇಕ ಆಸ್ಪತ್ರೆಗಳು ಈ ಯೋಜನೆ ಅಳವಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು, ಇದು ರೈತರ ಯೋಜನೆ ಹೀಗಾಗಿ ಈ ಯೋಜನೆ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡು ಪುನ: ಈ ಯೋಜನೆ ಜಾರಿಗೊಳಿಸಲಾಗಿದೆ ಎಂದರು.
ಸಹಕಾರ ಇಂದು ಬೃಹಾದಾಕರವಾಗಿ ಬೆಳೆದಿದೆ, ದೇಶದ ಆರ್ಥಿಕತೆ ಐದು ಟ್ರಿಲಿಯನ್ ಡಾಲರ್ ಗುರಿ ಕ್ರಮಿಸುವಲ್ಲಿ ಸಹಕಾರ ವಲಯದ ಪಾತ್ರ ಪ್ರಮುಖವಾಗಿದೆ, ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗಳು ಹೆಚ್ಚಾದರೆ ಮಾತ್ರ ಜಿಡಿಪಿ ಹೆಚ್ಚಾಗಲಿದೆ, ಹಳ್ಳಿಗಾಡಿನಲ್ಲಿ ಜನರು ಹೆಚ್ಚು ಬಡ್ಡಿಯಿಂದ ಶೋಷಣೆಗೊಳಪಡಬಾರದು ಎನ್ನುವ ಕಾರಣಕ್ಕೆ ಪತ್ತಿನ ವ್ಯವಸ್ಥೆ ರೂಪುಗೊಂಡಿತು ಎಂದರು.

ಸಹಕಾರ ಎಂದರೆ ಒಂದು ಹೆಮ್ಮೆ, ಸಹಕಾರ ಆಂದೋಲನ ಒಂದು ಪಕ್ಷಾತೀತ, ಸಹಕಾರ ವಲಯವನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದರು.

*ಸಹಕಾರ ಬ್ಯಾಂಕುಗಳಿಗೆ ಬಂಡವಾಳ ತೊಡಗಿಸಿ*
ಪ್ರಾಸ್ತಾವಿಕವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ಸಕ್ಕರೆ ಸಚಿವ ಹಾಗೂ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಮಾತನಾಡಿ, ಸಹಕಾರ ವಲಯದಲ್ಲಿ ಉತ್ತಮ ಸೇವೆ ನೀಡುತ್ತಿರುವ ಬ್ಯಾಂಕುಗಳಿಗೆ ಸರ್ಕಾರ ತನ್ನ ಬಂಡವಾಳವನ್ನು ತೊಡಗಿಸಿ ಆರ್ಥಿಕ ಚೈತನ್ಯ ತುಂಬುವ ಕೆಲಸ ಮಾಡಬೇಕಿದೆ, ಆದರೆ ಈ ವಿಷಯವಾಗಿ ಕೊಂಚ ಹಿನ್ನೆಡೆಯಾಗುತ್ತಿದ್ದು, ಸರ್ಕಾರ ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿದರೆ ಸಹಕಾರ ಬ್ಯಾಂಕ್ ಬಲವರ್ಧನೆಯಾಗಲು ಸಾಧ್ಯ ಎಂದರು.

ಸಹಕಾರ ಚಳವಳಿಗೆ ಎಲ್ಲ ಸರ್ಕಾರಗಳು ಬಲ ತುಂಬಿವೆ, ಮಹಾರಾಷ್ಟ್ರ, ಗುಜರಾತ್ ನಂತರ ಸಹಕಾರ ವಲಯದಲ್ಲಿ ಕೇಂದ್ರಬಿಂದುವಾಗಿ ಮಿಂಚುತ್ತಿರುವುದು ಕರ್ನಾಟಕ, 119 ವರ್ಷಗಳಿಂದ ಸಹಕಾರ ವಲಯ ರೈತರ, ಸಾರ್ವಜನಿಕರ ಸೇವೆ ಮಾಡುತ್ತಾ ದಾಪುಗಾಲು ಇರಿಸಿದೆ ಎಂದು ಸಹಕಾರ ಚಳವಳಿಯ ಮಹತ್ವವನ್ನು ವಿವರಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿ ಶತಮಾನೋತ್ಸವ ಭವನ ಲೋಕಾರ್ಪಣೆಗೊಳಿಸಿದರು. ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ, ಮಾಜಿ ಸಚಿವ ಹಾಗೂ ಹಿರಿಯ ಸಹಕಾರಿ ಧುರೀಣ ಜಿ.ಟಿ. ದೇವೆಗೌಡ, ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ, ಶಾಸಕರಾದ ಯಶವಂತರಾಯಗೌಡ ಪಾಟೀಲ, ಸಿ.ಎಸ್. ನಾಡಗೌಡ, ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಶಾಸಕರಾದ ಎಚ್.ವೈ. ಮೇಟಿ, ಅಶೋಕ ಪಟ್ಟಣ, ವಿನಯ ಕುಲಕರ್ಣಿ, ನಂಜೇಗೌಡ, ಜೆ.ಟಿ. ಪಾಟೀಲ, ರಾಘವೇಂದ್ರ ಹಿಟ್ನಾಳ, ಧುರ್ಯೋಧನ ಐಹೊಳಿ, ವಿಠ್ಠಲ ಕಟಕದೊಂಡ, ಅಶೋಕ ಮನಗೂಳಿ, ರಾಜುಗೌಡ ಪಾಟೀಲ ಕುದರಿಸಾಲೋಡಗಿ, ವಿ.ಪ. ಸದಸ್ಯರಾದ ಸುನೀಲಗೌಡ ಪಾಟೀಲ, ಹಣಮಂತ ನಿರಾಣಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಮೊದಲಾದವರು ಪಾಲ್ಗೊಂಡಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button