Featured StoryState News

ಕೇಂದ್ರ ಸರ್ಕಾರ ನಬಾರ್ಡ ನಿಂದ ಸಾಲ ನೀಡಲು ನಿಲ್ಲಿಸಿದೆ: ಸಿದ್ಧರಾಮಯ್ಯ

ವಿಜಯಪುರ : ಕೇಂದ್ರ ಸಹಕಾರ ಸಂಘಗಳಿಗೆ ನಬಾರ್ಡ್ ಸಾಲ ನೀಡಲು ನಿಲ್ಲಿಸಿದ್ದು, ಕೂಡಲೇ ಇದನ್ನು ಪುನ: ಆರಂಭಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಹಾಗೂ ನಬಾರ್ಡ್ ಗೆ ಶೀಘ್ರವೇ ಪತ್ರ ಬರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಕಟಿಸಿದರು.

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆವರಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಸಹಕಾರ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ 70 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ಹಾಗೂ ವಿಜಯಪುರ ಡಿಸಿಸಿ ಬ್ಯಾಂಕ್ ಶತಮಾನೋತ್ಸವ ಭವನ ಲೋಕಾರ್ಪಣೆ ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ರೈತರಿಗೆ ಸಾಲ ನೀಡುವ ಸಹಕಾರ ಬ್ಯಾಂಕುಗಳಿಗೆ ನಬಾರ್ಡ್ ನಿಂದ ಸಾಲ ಕೊಡುವ ವ್ಯವಸ್ಥೆ ಇತ್ತು, ಆದರೆ ಇತ್ತೀಚಿಗೆ ಅನೇಕ ನಿಯಮಾವಳಿ ರೂಪಿಸಿ ಸಾಲ ನೀಡಲು ಹಿಂದೇಟು ಹಾಕುತ್ತಿವೆ, ಈ ಹಿನ್ನೆಲೆಯಲ್ಲಿ ಕೂಡಲೇ ಈ ಎಲ್ಲ ತೊಡಕುಗಳನ್ನು ನಿವಾರಿಸಿ ಸರಳವಾಗಿ ಕೇಂದ್ರ ಸಹಕಾರಿ ಬ್ಯಾಂಕುಗಳಿಗೆ ಸಾಲ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳಿಗೆ ಹಾಗೂ ನಬಾರ್ಡ್ಗೆ ಶೀಘ್ರವೇ ಪತ್ರ ಬರೆಯುವೆ ಎಂದರು.
ಈ ವಿಷಯವಾಗಿ ಈ ಹಿಂದೆ ಶಿವಾನಂದ ಪಾಟೀಲರು ನನ್ನ ಗಮನ ಸೆಳೆದಿದ್ದರು ಎಂದ ಸಿದ್ಧರಾಮಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದ ಬಿಜೆಪಿ ಸಂಸದರಾದ ರಮೇಶ ಜಿಗಜಿಣಗಿ ಹಾಗೂ ಪಿ.ಸಿ. ಗದ್ದಿಗೌಡರ ಅವರ ಗಮನ ಸೆಳೆದ ಮುಖ್ಯಮಂತ್ರಿಗಳು, ನಾನು ಈಗಾಗಲೇ ನಾಳೆಯೇ ಪತ್ರ ಬರೆಯುವೆ, ನೀವು ಸಹ ಪ್ರಯತ್ನ ಮಾಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತನ್ನಿ ಎಂದು ಕೋರಿದರು.

ಸ್ವಾತಂತ್ರ್ಯ ಪೂರ್ವದಿಂದಲೂ ಸಹ ಸಹಕಾರ ಕ್ಷೇತ್ರ ಬೆಳೆಯುತ್ತಿದೆ, 1905 ರಲ್ಲಿ ಕಣಗಿನಹಾಳದಲ್ಲಿ ಸಿದ್ಧನಗೌಡ ಪಾಟೀಲರ ಸಾರಥ್ಯದಲ್ಲಿ ಆರಂಭಗೊಂಡ ಸಹಕಾರ ಚಳವಳಿ ಇಂದು ಬೃಹಾದಾಕರವಾಗಿ ಬೆಳೆದಿದೆ, ಒಂದೇ ಸೊಸೈಟಿಯಿಂದ ಆರಂಭಗೊಂಡ ಸಹಕಾರ ವಲಯದಲ್ಲಿ ಇಂದು ರಾಜ್ಯದಲ್ಲಿಯೇ 45,600 ಸೊಸೈಟಿಗಳು ಅಸ್ತಿತ್ವದಲ್ಲಿದ್ದರೆ, ಇಡೀ ದೇಶದಲ್ಲಿ ಎಂಟೂವರೆ ಲಕ್ಷ ಸೊಸೈಟಿಗಳಿದ್ದು, 31 ಕೋಟಿ ಸದಸ್ಯರು ಸಹಕಾರ ವಲಯದಲ್ಲಿ ಸದಸ್ಯರಿದ್ದಾರೆ ಎಂದು ವಿವರಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಸಹಕಾರ ಸಂಘದಲ್ಲಿ ತೊಡಗಿಸಿಕೊಂಡಿರಲಿಲ್ಲ, ಇದನ್ನು ಮನಗಂಡು ಅವರು ಸಹ ಸಹಕಾರ ವಲಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರ ಷೇರು ಬಂಡವಾಳವನ್ನು ಸರ್ಕಾರವೇ ಭರಣಾ ಮಾಡುವ ವ್ಯವಸ್ಥೆಯನ್ನು ನನ್ನ ಅವಧಿಯಲ್ಲಿ ರೂಪಿಸಲಾಗಿತ್ತು ಎಂದರು.

ದೇಶದಲ್ಲಿ ಅಸಮಾನತೆ ಇದೆ, ಜಾತಿ ವ್ಯವಸ್ಥೆ ಇದೆ, ಅನೇಕ ಧರ್ಮಗಳಿವೆ, ಆದರೆ ಸಹಕಾರ ರಂಗಕ್ಕೆ ಜಾತಿ, ಧರ್ಮದ ಸೋಂಕು ಇಲ್ಲ, ಯಾವ ಸಮಾಜದ ಸೋಂಕು ತಗುಲಿಲ್ಲ, ಜಾತಿ ರಹಿತ, ಧರ್ಮ ರಹಿತ ಕ್ಷೇತ್ರವೆಂದರೆ ಅದು ಸಹಕಾರ ಕ್ಷೇತ್ರ. ಸಹಕಾರ ಕ್ಷೇತ್ರ ಆರ್ಥಿಕವಾಗಿ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ, ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ನಾಣ್ಣುಡಿಯಂತೆ ಎಲ್ಲ ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ವ್ಯಾಪಿಸಿಕೊಂಡಿದ್ದು ಸಹಕಾರ ಕ್ಷೇತ್ರ, ಯಾವ ರಾಜ್ಯದಲ್ಲಿ ಸಹಕಾರ ಕ್ಷೇತ್ರ ಉನ್ನತ ಮಟ್ಟಕ್ಕೆ ಬೆಳೆದಿದೆಯೋ ಆ ರಾಜ್ಯ ಆರ್ಥಿಕವಾಗಿ ಬೆಳವಣಿಗೆಯಾಗುತ್ತದೆ ಎಂಬಂತೆ ಜಿಡಿಪಿ ಸಹ ಬೆಳವಣಿಗೆಯಲ್ಲಿ ಸಹಕಾರ ವಲಯದ ಪಾತ್ರ ಪ್ರಮುಖವಾಗಿದೆ.
ಹಾಲಿನ ಸೊಸೈಟಿಗಳು ಆರ್ಥಿಕ ನೆರವು ನೀಡುವ ಮೂಲಕ ಹಾಲು ಉತ್ಪಾಧಕರಿಗೆ ಪ್ರತಿ ಲೀ. ಎಂಟು ರೂ. ಪ್ರೋತ್ಸಾಹ ಧನವನ್ನು ನಿರ್ಣಯ ಮಾಡಲಾಗಿದೆ, ಈ ಹಿಂದೆ ಹಾಲು ಉತ್ಪಾದಕರ ಸಂಘಟನೆಯವರು ನನ್ನನ್ನು ಭೇಟಿ ಮಾಡಿ ಹಾಲು ಉತ್ಪಾದನೆ ಜಾಸ್ತಿಯಾಗಿದೆ, ಮಾರಾಟ ಮಾಡಲು ಆಗುತ್ತಿಲ್ಲ, ಸರ್ಕಾರ ನೆರವಿಗೆ ಬರಬೇಕು ಎಂದು ಕೋರಿದ್ದರು. ಆಗ ತಕ್ಷಣವೇ ಎಲ್ಲ ಮಕ್ಕಳಿಗೆ ಉಚಿತ ಪೌಷ್ಠಿಕ ಹಾಲು ನೀಡುವ ಯೋಜನೆ ಕ್ಷೀರಭಾಗ್ಯ ರೂಪಿತವಾಯಿತು, ಒಂದು ವರ್ಷಕ್ಕೆ 1200 ಕೋಟಿ ರೂ. ಕ್ಷೀರಭಾಗ್ಯ ಯೋಜನೆಗೆ ವ್ಯಯಿಸಲಾಗುತ್ತಿದ್ದು, ಈ ಯೋಜನೆಯಿಂದ ಹಾಲು ಉತ್ಪಾದಕರಿಗೆ ಉತ್ತೇಜನ ಹಾಗೂ ಮಕ್ಕಳಿಗೆ ಪೌಷ್ಠಿಕ ಹಾಲು ದೊರಕಿಸುವ ಎರಡು ಕಾರ್ಯಗಳು ಸಾಕಾರಗೊಂಡವು ಎಂದರು.

ಸಂಸದರಿಗೆ ಮನವಿ ಮಾಡಿಕೊಂಡ ಸಿದ್ಧರಾಮಯ್ಯ:
ಬರ ಪರಿಸ್ಥಿತಿಯನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ, ಎನ್ಡಿಆರ್ಎಫ್ ನಿಯಮಾವಳಿಗೆ ತಿದ್ದುಪಡಿ ಮಾಡಿ ಹೆಚ್ಚಿನ ಪರಿಹಾರವನ್ನು ರಾಜ್ಯದ ಜನರಿಗೆ ಕೇಂದ್ರ ಒದಗಿಸಿಕೊಡಬೇಕಿದೆ, ರೈತರ ವಿಷಯದಲ್ಲಿ ನಾನು ರಾಜಕಾರಣ ಮಾಡುವುದಿಲ್ಲ, ಈ ಬಗ್ಗೆ ನೀವು ಸಹ ಕೇಂದ್ರದ ಗಮನ ಸೆಳೆಯಿರಿ ಎಂದು ಸಿದ್ಧರಾಮಯ್ಯ ಸಂಸದ ಜಿಗಜಿಣಗಿ ಹಾಗೂ ಗದ್ದಿಗೌಡರ ಅವರಿಗೆ ಮನವಿ ಮಾಡಿಕೊಂಡರು.

ಬರ ಪರಿಸ್ಥಿತಿ ವಿಷಯವಾಗಿ ನಾವು ಯಾವ ರಾಜಕಾರಣ ಮಾಡುವುದಿಲ್ಲ, ಕೇಂದ್ರದಿಂದ ಹಣ ಬಿಡುಗಡೆಯಾಗಿ ರೈತರಿಗೆ ಅನುಕೂಲವಾದರೆ ಸಾಕು ಎನ್ನುವು ನಿಲುವು ನನ್ನದು ಎಂದರು.
ಆದರೂ ಸಹ ರಾಜ್ಯ ಸರ್ಕಾರ ಬರಪರಿಸ್ಥಿತಿಯನ್ನು ನಿಭಾಯಿಸುತ್ತಿದೆ, ಕುಡಿಯುವ ನೀರು, ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಲು ಇದಕ್ಕೆ ಎಷ್ಟೇ ಹಣಕಾಸಿನ ನೆರವೂ ಇದ್ದರೂ ಸರ್ಕಾರಕ್ಕೆ ಕೋರುವಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿ, ಸಿಇಓಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗುತ್ತಿದ್ದು, ಕುಡಿಯುವ ನೀರು ಹಾಗೂ ಮೇವಿಗೆ ಸಂಬಂಧಿಸಿದಂತೆ 800 ಕೋಟಿ ರೂ.ಗಳನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ ಎಂದು ವಿವರಿಸಿದರು.

ಕೆಂಚಪ್ಪ ಕುಂಚದಲ್ಲಿ ಅರಳಿದ ಸಿದ್ಧರಾಮಯ್ಯ:
ವೇದಿಕೆಯ ಸ್ಥಳದಲ್ಲಿಯೇ ಕೇವಲ ಎರಡು ನಿಮಿಷಯದಲ್ಲಿಯೇ ವಿಜಯಪುರ ಕಲಾವಿದ ಕೆಂಚಪ್ಪ ಬಡಿಗೇರ ಸಿದ್ಧರಾಮಯ್ಯ ಅವರ ಸುಂದರ ಕಲಾಕೃತಿ ಅರಳಿಸಿದರು. ಸಂದೇಶ ನೀಡಲು ಸಿದ್ಧರಾಮಯ್ಯ ಅಣಿಯಾಗುತ್ತಿದ್ದಂತೆ ಸಚಿವ ರಾಜಣ್ಣ ಅವರು ನಿಮ್ಮ ಕಲಾಕೃತಿ ರಚನೆಯಾಗಿದೆ ನೋಡಿ ಎಂದಾಗ ಅತ್ಯಂತ ಸಂತೋಷಗೊಂಡ ಸಿದ್ಧರಾಮಯ್ಯ ಅವರು ಕುತೂಹಲದಿಂಧ ಕಲಾಕೃತಿಯನ್ನು ವೀಕ್ಷಿಸಿ ಕಲಾಕೃತಿ ರಚಿಸಿದ ಕಲಾವಿದ ಕೆಂಚಪ್ಪ ಅವರಿಗೆ ಹಾರ ಹಾಕಿ ವಿಶೇಷ ಅಭಿನಂದನೆ ಸಲ್ಲಿಸಿದ್ದು ವಿಶೇಷವಾಗಿತ್ತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button