ಮಡಿಕೇರಿ ಡಿ.5 : ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಮತದಾರರ ಪಟ್ಟಿ ವೀಕ್ಷಕರಾದ ವಿ.ಅನ್ಬುಕುಮಾರ್ ಅವರು ಸೂಚಿಸಿದ್ದಾರೆ.
ನಗರದ ಸಂತ ಜೋಸೆಫರ ಶಾಲೆಯ ಸಭಾಂಗಣದಲ್ಲಿ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳಿಗೆ ಶನಿವಾರ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲಾ ಚುನಾವಣಾಧಿಕಾರಿ ಅವರು ಚುನಾವಣಾ ಅಧಿಸೂಚನೆ ಹೊರಡಿಸಿದ ದಿನದಿಂದ ಚುನಾವಣಾ ಫಲಿತಾಂಶ ಪ್ರಕಟಿಸುವ ದಿನದವರೆಗೆ ಮತ್ತು ಚುನಾವಣೆ ಸಂಬಂಧ ಉಪಯೋಗಿಸಿದ ದಾಖಲೆಗಳು ಸುರಕ್ಷಿತವಾಗಿ ಇಡುವ ತನಕ, ಎಲ್ಲಾ ಕರ್ತವ್ಯವು ಆರ್‍ಒ ಮತ್ತು ಎಆರ್‍ಒಗಳ ಜವಾಬ್ದಾರಿಯಾಗಿದೆ. ಆದ್ದರಿಂದ ಶ್ರದ್ಧೆಯಿಂದ ಚುನಾವಣಾ ಆಯೋಗದ ನಿರ್ದೇಶನಗಳನ್ನು ಓದಿಕೊಂಡು ಕಾರ್ಯನಿರ್ವಹಿಸಬೇಕು ಎಂದು ವಿ.ಅನ್ಬುಕುಮಾರ್ ಅವರು ತಿಳಿಸಿದರು.
ಚುನಾವಣೆಗೆ ನಿಯೋಜಿಸಿರುವ ಎಲ್ಲಾ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಕ್ಷತೆಯಿಂದ ಕೆಲಸ ನಿರ್ವಹಿಸಬೇಕು. ಯಾವ ಅಡ್ಡಿ ಆತಂಕಗಳು ಇಲ್ಲದೆ ಸುಗಮವಾಗಿ ಚುನಾವಣೆ ನಡೆಸಬೇಕು ಎಂದು ಅವರು ಹೇಳಿದರು.
ಚುನಾವಣೆಯು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಮಹತ್ವದ ಪ್ರಕ್ರಿಯೆಯಾಗಿದ್ದು, ಚುನಾವಣಾಧಿಕಾರಿಯಾಗಿ ನೇಮಕ ಮಾಡಿರುವ ರಿಟರ್ನಿಂಗ್ ಅಧಿಕಾರಿಗಳ ಕಾರ್ಯ ಅತ್ಯಂತ ಮಹತ್ವ ಹಾಗೂ ಜವಾಬ್ದಾರಿಯುತವಾಗಿದೆ ಎಂದು ಅನ್ಬುಕುಮಾರ್ ಅವರು ನುಡಿದರು.
ಮತದಾನ ಕೇಂದ್ರಗಳು, ನಾಮಪತ್ರ ಸ್ವೀಕೃತಿ, ಘೋಷಣಾ ಪತ್ರ, ನಾಮಪತ್ರ ಸೂಚನಾ ಪ್ರಕಟಣೆ, ನಾಮಪತ್ರಗಳ ಪರಿಶೀಲನೆ, ಚುನಾವಣಾ ಚಿಹ್ನೆಯ ಹಂಚಿಕೆ, ಮತಪತ್ರಗಳು, ಮತದಾನ, ಮತ ಎಣಿಕೆಗೆ ಸಿದ್ಧತೆ, ಮತ ಎಣಿಕೆಯ ವಿಧಾನ ಹೀಗೆ ಪ್ರತಿಯೊಂದರ ಬಗ್ಗೆ ಅಧ್ಯಯನ ಮಾಡಿಕೊಂಡು ಚುನಾವಣಾ ಕರ್ತವ್ಯ ನಿರ್ವಹಿಸಬೇಕು ಎಂದು ವಿ.ಅನ್ಬುಕುಮಾರ್ ಅವರು ಸಲಹೆ ಮಾಡಿದರು.
ಮಡಿಕೇರಿ ತಾಲ್ಲೂಕು ನೋಡಲ್ ಅಧಿಕಾರಿ ನಿಲೇಶ್ ಸಿಂದೆ, ತಹಶೀಲ್ದಾರ್ ಮಹೇಶ್, ತರಬೇತಿದಾರರಾದ ಕೆ.ಜೆ.ದಿವಾಕರ, ಪ್ರಸಾದ್, ನೋಡಲ್ ಅಧಿಕಾರಿಗಳು, ಆರ್‍ಒ ಮತ್ತು ಎಆರ್‍ಒಗಳು ಇತರರು ಹಾಜರಿದ್ದರು.