
ರಾಯಚೂರು: ಮಾವಿನ ಕೆರೆ ಒತ್ತುವರಿ ಸರ್ವೆಗೆ ಜಿಲ್ಲಾಧಿಕಾರಿ ವೆಂಕಟೇಶ ಕುಮಾರ್ ನಿರ್ದೇಶನ
ರಾಯಚೂರು,ಅ.07:- ನಗರದ ಐತಿಹಾಸಿಕ ಮಾವಿನ ಕೆರೆ ಒತ್ತುವರಿ ಪ್ರದೇಶವನ್ನು ಸರ್ವೆ ಮಾಡಿ ಗಡಿ ಗುರುತಿಸಿ ಧ್ವಜ ಅಳವಡಿಸಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅವರು ಅ.7ರ ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ರಾಯಚೂರು ಜಿಲ್ಲೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರದ ಮಾವಿನ ಕೆರೆ ಅಭಿವೃದ್ಧಿಗೆ ಅನುದಾನ ಲಭ್ಯವಿದೆ. ಮೊದಲು ಒತ್ತುವರಿ ಕುರಿತು ಸರ್ವೆ ಕಾರ್ಯ ಆರಂಭಿಸಬೇಕು. ಒಂದು ವೇಳೆ ಒತ್ತುವರಿಯಾಗಿರುವುದು ಕಂಡುಬಂದಲ್ಲಿ ನಗರಸಭೆ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಬೇಕು. ಮೊದಲು ಸರ್ವೆ ಕಾರ್ಯದ ನಂತರ ಕೆರೆಯ ಗಡಿ ಗುರುತಿಸಿ ಧ್ವಜ ನೆಡಬೇಕು, ನಗರ, ಜಿಲ್ಲೆಯ ಯಾವುದೇ ಕೆರೆಗಳ ಅಭಿವೃದ್ಧಿ ಕಾಮಗಾರಿ ನಡೆಸುವ ಮುನ್ನ ಕೆರೆ ಅಭಿವೃದ್ಧಿ ಪ್ರಾಧಿಕಾರದ ಗಮನಕ್ಕೆ ತರುವುದು ಕಡ್ಡಾಯವಾಗಿದ್ದು, ಸ್ಥಳೀಯ ಹಣಕಾಸಿನ ಸಂಪನ್ಮೂಲಗಳಿಂದ 10 ಕೆರೆಗಳಿಗೆ ಅನುದಾನ ಬಳಸುವ ಬದಲಗಿ ಎಲ್ಲ ಅನುದಾನ ಒಂದೇ ಕೆರೆಗೆ ಬಳಸಿಕೊಂಡು ಅದನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸುವಂತೆ ಸೂಚಿಸಿದರು.
ಕೆರೆ ಒತ್ತುವರಿ ತೆರವುಗೊಳಿಸಬೇಕು, ಕೆರೆಗಳಿಗೆ ಮಾಲಿನ್ಯ ಸಂಗ್ರವಾಹಗದಂತೆ ನಿಗಾವಹಿಸಬೇಕು ಮತ್ತು ಚರಂಡಿ ನೀರು ಕೆರೆಗಳಿಗೆ ಅರಡದಂತೆ ತಡೆಯಬೇಕು. ಕೆರೆಗಳ ಸುತ್ತ ಪೆನ್ಸಿಂಗ್ ಅಳವಡಿಸಬೇಕು ಹಾಗೂ ಮರಗಳನ್ನು ಬೆಳಸಬೇಕು. ಕೆರೆ ಅಂಗಳದಲ್ಲಿ ಹೂಳುತೆಗಯಬೇಕು. ಕೆರೆಗಳ ಸಮಗ್ರ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೆರೆಗಳಲ್ಲಿ ಯಾವುದೇ ಶಾಶ್ವತ ಕಟ್ಟಡ ನಿರ್ಮಿಸಿರುವುದು ಕಂಡುಬಂದಲ್ಲಿ ತೆರವುಗೊಳಿಸಬೇಕೆಂದು ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಒಟ್ಟು 231 ಕೆರೆಗಳ ಪೈಕಿ 221 ಜಿಲ್ಲಾ ಪಂಚಾಯತ್ ನಿರ್ವಹಿಸುತ್ತಿದೆ. ನಗರ ವ್ಯಾಪ್ತಿಯಲ್ಲಿ 5 ಕೆರೆಗಳು ಬರುತ್ತವೆ. ಜಿಲ್ಲೆಯ ಕೆಲ ಕೆರೆಗಳು ಒತ್ತುವರಿ ಕುರಿತು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಕೆರೆಗಳ ಸರ್ವೆ ಕಾರ್ಯಕ್ಕೆ ಅಡಿ ಪಡಿಸುವವರ ವಿರುದ್ದ ಪ್ರಕರಣ ದಾಖಲಿಸಬೇಕು. ಸರ್ವೆ ಕಾರ್ಯದಲ್ಲಿ ಕಂದಾಯ ಇಲಾಖೆಯ ಮೂಲ ದಾಖಲೆಗಳ ಪ್ರಕಾರ ಒತ್ತುವರಿ ತೆರವುಗೊಳಿಸಬೇಕು. ಕೆರೆಯ ಭೂಮಿ ಸಂರಕ್ಷಣೆ ವಿಚಾರದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕೆಂದರು.
ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ತಾಲೂಕಿನ ಇಡಪನೂರು ಗ್ರಾಮದಲ್ಲಿ ಕೆರೆ ಹೊಡೆದು ಅಪಾರ ಪ್ರಮಾಣದ ನೀರು ಗ್ರಾಮದೊಳಗೆ ನುಗ್ಗಿ ಅಪಾರ ಹಾನಿಯಾಗಿರುವ ಸ್ಥಳಕ್ಕೆ ನೀರಾವರಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಬೇಕು. ಕೆರೆಯು 40 ಎಕರೆಗಿಂತ ಹೆಚ್ಚಿದ್ದರೆ ನೀರಾವರಿ ಇಲಾಖೆಯ ಅಧಿಕಾರಿಗಳು ಶೀಘ್ರ ಸರ್ವೆ ಮಾಡಿ ವರದಿ ನೀಡಬೇಕೆಂದು ಸೂಚಿಸಿದರು.
ಕೆರೆ ಹೊಡೆದು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿರುವವರಿಗೆ ಪರಿಹಾರ ನೀಡಬೇಕು, ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕಾಲಹರಣ ಮಾಡದೆ ಸ್ಥಳಕ್ಕೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಗ್ರಾಮಸ್ಥರಿಂದ ಅರಿತಿಕೊಳ್ಳಬೇಕು. ತಾಲೂಕಿನ ಜುಲಾಮಗೆರಿ ಕೆರೆಯು 35 ಎಕರೆಯಲ್ಲಿದೆ. ಮಳೆಯಿಂದ ಯಾವುದೇ ಹಾನಿಯಾಗದಂತೆ ಈಗಾಗಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ನೀರು ಗ್ರಾಮದೊಳಗೆ ನುಗ್ಗದಂತೆ ಕೆರೆಗೆ ತಡೆಗೋಡೆ ನಿರ್ಮಿಸಬೇಕೆಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಅಪರ ಜಿಲ್ಲಾಧಿಕಾರಿ ದುರಗೇಶ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.




