ಮಂಗಳೂರು: ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಮಂಗಳೂರು: ಜಾಗದ ತಕರಾರಿಗೆ‌ ಸಂಬಂಧಿಸಿದಂತೆ ನೆರೆಮನೆಯಾತನನ್ನು ಕೊಲೆಗೈದ ಪ್ರಕರಣ ಸಂಬಂಧ ಅಪರಾಧಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 3 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಗಾಂಧಿನಗರ ನಿವಾಸಿ ಯೋಗೀಶ್ (55) ಶಿಕ್ಷೆಗೊಳಗಾದವನು. ಸ್ಥಳೀಯ ನಿವಾಸಿ ಉಮೇಶ ಗೌಡ(58) ಕೊಲೆಯಾದವರು.
ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ 2020ರ ಫೆ.9ರಂದು ಈ ಕೊಲೆ ನಡೆದಿತ್ತು.
ಯೋಗೀಶ್‌ಗೆ ಸೇರಿದ ಜಾಗವನ್ನು ಉಮೇಶ್ ಗೌಡ ಕುಟುಂಬಸ್ಥರು ತಮ್ಮ ಮನೆಗೆ ತೆರಳಲು ಕಾಲು ದಾರಿಯಾಗಿ ಬಳಸಿಕೊಂಡಿದ್ದರು.

ಇದಕ್ಕೆ ಯೋಗೀಶ್ ಆಕ್ಷೇಪವಿತ್ತು. ಈ ವಿಚಾರವಾಗಿ ನಡೆದ ವಾಗ್ವಾದ ಕೊಲೆಯಲ್ಲಿ ಅಂತ್ಯಗೊಂಡಿತ್ತು.
ಬೆಳ್ತಂಗಡಿಯ ಅಂದಿನ ವತ್ತ ನಿರೀಕ್ಷಕರಾಗಿದ್ದ ಸಂದೇಶ್ ಪಿ.ಜಿ ಪ್ರಕರಣದ ತನಿಖೆ ನಡೆಸಿದ್ದರು. ಯೋಗೀಶ ಪ್ರಮುಖ ಆರೋಪಿಯಾಗಿದ್ದು, ಅವರ ಮಗ ಜೀವನ್ ಎರಡನೇ ಆರೋಪಿಯಾಗಿದ್ದ.

ಎರಡನೇ ಆರೋಪಿ ಜೀವನ್ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಯೋಗೀಶನ ಜಾಮೀನು ಅರ್ಜಿ ಎರಡು ಬಾರಿ ತಿರಸ್ಕೃತಗೊಂಡಿತ್ತು. ಹೀಗಾಗಿ ಕಳೆದ 3 ವರ್ಷ 9 ತಿಂಗಳುಗಳಿಂದ ನ್ಯಾಯಾಂಗ ಬಂಧನದಲ್ಲಿಯೇ ಇದ್ದನು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯದ ನ್ಯಾಯಾಧೀಶೆ ಪ್ರೀತಿ ಕೆ.ಪಿ ಅವರು ಡಿ.6ರಂದು ಆರೋಪಿ ಯೋಗೀಶನನ್ನು ತಪ್ಪಿತಸ್ಥನೆಂದು ತೀರ್ಮಾನಿಸಿ ತೀರ್ಪು ನೀಡಿದರು.
2ನೇ ಆರೋಪಿಯನ್ನು ಖುಲಾಸೆಗೊಳಿಸಿದ್ದಾರೆ. ಯೋಗೀಶನಿಗೆ ಭಾರತೀಯ ದಂಡಸಂಹಿತೆ ಕಲಂ 302ರ ಅಡಿ ಜೀವಾವಧಿ ಶಿಕ್ಷೆ ಹಾಗೂ 3 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ವಸೂಲಾದ 3 ಲಕ್ಷ ರೂ. ದಂಡವನ್ನು ಉಮೇಶ ಅವರ ಪತ್ನಿ ಲೀಲಾವತಿ ಅವರಿಗೆ ಪರಿಹಾರ ರೂಪದಲ್ಲಿ ಸಂದಾಯ ಮಾಡಲು ಆದೇಶ ನೀಡಿದ್ದಾರೆ. ಅಲ್ಲದೆ ಅವರಿಗೆ ಆರ್ಥಿಕ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದಾರೆ.

ಅಭಿಯೋಜನೆಯ ಪರ 16 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು ವಿಶೇಷ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ಸರಕಾರದ ಪರ ವಾದಿಸಿದ್ದರು.

Latest Indian news

Popular Stories