
ನೆನಪಾಗದ ನಾರಾಯಣರಾವ್
ಬೀದರ್,ಜ.7:- ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಿಸುವದರ ಅಗತ್ಯದ ಬಗ್ಗೆ, ಬಸವಾದಿ ಶರಣರ ಸಮಾನತೆಯ ಕ್ರಾಂತಿಯ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದವರು ಕಾಂಗ್ರೆಸ್ ನಾಯಕ, ಶಾಸಕ, ದಿ. ಬಿ. ನಾರಾಯಣರಾವ್ ಅವರು.
`ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣವಾಗಬೇಕು ಎನ್ನುವುದು ಜೀವನದ ಮಹದಾಸೆಯಾಗಿದೆ. ದಯವಿಟ್ಟು ಅದನ್ನು ನಡೆಸಿಕೊಡಿ’ ಎಂದು ನಾರಾಯಣರಾವ್ ಕಳಕಳಿಯಿಂದ ಮನವಿ ಮಾಡಿದ್ದರು. ಅಧಿವೇಶನದಲ್ಲಿ ಪಾಲ್ಗೊಂಡ ಎಲ್ಲರೂ ನಾರಾಯಣರಾವ್ ಅವರ ಮಾತುಗಳನ್ನು ಗಮನವಿಟ್ಟು ಕೇಳಿದ್ದರು. ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಶರಣರ ಬಗ್ಗೆ ನಾರಾಯಣರಾವ್ ಅವರಿಗಿದ್ದ ಕಾಳಜಿಯನ್ನು ಕೊಂಡಾಡಿದ್ದರು.
ಕಲ್ಯಾಣದ ಬಗ್ಗೆ, ಶರಣರ ಬಗ್ಗೆ, ನೂತನ ಅನುಭವ ಮಂಟಪ ನಿರ್ಮಿಸುವ ಬಗ್ಗೆ ಅತೀವ ಕಾಳಜಿ ಹೊಂದಿರುವ ನಾರಾಯಣರಾವ್ ಕೆಲ ತಿಂಗಳುಗಳ ಹಿಂದೆಯೇ ಕೋವಿಡ್ನಿಂದಾಗಿ ಕೊನೆಯುಸಿರೆಳೆದಿದ್ದರು. ನಾರಾಯಣರಾವ್ ಅವರು ಶಾಸನ ಸಭೆಯಲ್ಲಿ ಆಡಿದ ಮಾತುಗಳನ್ನು ಬಸವಕಲ್ಯಾಣದ ಜನ ಈಗಲೂ ಸ್ಮರಿಸುತ್ತಿದ್ದಾರೆ. ಆದರೆ, ಜ. 6 ರಂದು ಬಸವಕಲ್ಯಾಣದಲ್ಲಿ ನಡೆದ ನೂತನ ಅನುಭವ ಮಂಟಪದ ಭೂಮಿಪೂಜೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ, ಸಚಿವರು, ಶಾಸಕರು ಸೇರಿದಂತೆ ಯಾರೊಬ್ಬರೂ ನಾರಾಯಣರಾವ್ ಅವರನ್ನು ನೆನಪು ಮಾಡಿಕೊಳ್ಳದಿರುವುದು ಸಾರ್ವಜನಿಕರಿಗೆ ಬೇಸರವುಂಟು ಮಾಡಿದೆ.
ಆಡಳಿತ ಪಕ್ಷ ಬಿಜೆಪಿಯ ನಾಯಕರು ನಾರಾಯಣರಾವ್ ಅವರ ಹೆಸರನ್ನು ಪ್ರಸ್ತಾಪಿಸಲಿಲ್ಲ. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕರೂ ನಾರಾಯಣರಾವ್ ಅವರನ್ನು ನೆನಪಿಸಿಕೊಳ್ಳಲಿಲ್ಲ. ಅನುಭವ ಮಂಟಪ ನಿರ್ಮಾಣಕ್ಕೆ ನಡೆದ ಪ್ರಯತ್ನಗಳನ್ನು ಕಾಂಗ್ರೆಸ್ ನಾಯಕರೊಬ್ಬರು ಸಭೆಯ ಮುಂದಿಟ್ಟಿದ್ದರು. ಆದರೆ, ಅವರೂ ತಮ್ಮದೇ ಪಕ್ಷದ ಶಾಸಕರಾಗಿದ್ದ ನಾರಾಯಣರಾವ್ ಅವರ ಹೆಸರನ್ನು, ನೂತನ ಅನುಭವ ಮಂಟಪ ನಿರ್ಮಾಣಕ್ಕೆ ನಾರಾಯಣರಾವ್ ನಡೆಸಿದ ಪ್ರಯತ್ನವನ್ನು ತಿಳಿಸುವ ಗೋಜಿಗೆ ಹೋಗಲಿಲ್ಲ.
ಬಿಜೆಪಿಯವರು ನಾರಾಯಣರಾವ್ ಅವರನ್ನು ಮರೆತಿರಬಹುದು. ಕನಿಷ್ಠ ಕಾಂಗ್ರೆಸ್ನವರಾದರೂ ನೆನಪು ಮಾಡಿಕೊಳ್ಳಬಹುದಿತ್ತು ಎನ್ನುವುದು ಕಲ್ಯಾಣದ ಜನರ ಅಭಿಪ್ರಾಯ.




