ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಬಣದ ಮಾಜಿ ಕಾರ್ಪೊರೇಟರ್ ಮತ್ತು ಶಿವಸೇನೆಯ ಮಾಜಿ ಶಾಸಕರ ಪುತ್ರ ಅಭಿಷೇಕ್ ಘೋಸಲ್ಕರ್ ಅವರ ಮೇಲೆ ಗುರುವಾರ ರಾತ್ರಿ ಫೇಸ್‌ಬುಕ್ ಲೈವ್‌ನಲ್ಲಿರುವಾಗಲೇ ಗುಂಡಿನ ದಾಳಿ ನಡೆಸಿರುವ ಘಟನೆ ವರದಿಯಾಗಿದೆ.
ಮುಂಬೈನ ದಹಿಸರ್‌ನಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಕಾರ್ಯಕರ್ತನಾಗಿದ್ದ ಹಾಗೂ ಲೈವ್ ವೇಳೆ ಜೊತೆಗಿದ್ದ ಮೌರಿಸ್ ನೊರೊನ್ಹಾ ಎಂಬಾತನು ಈ ದಾಳಿ ನಡೆಸಿರುವುದಾಗಿ ‘ದಿ ಫ್ರೀ ಪ್ರೆಸ್ ಜರ್ನಲ್’ ವರದಿ ಮಾಡಿದ್ದು, ಅಭಿಷೇಕ್ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿರುವುದಾಗಿ ತಿಳಿಸಿದೆ.
ಘೋಸಲ್ಕರ್‌ಗೆ ಎರಡರಿಂದ ಮೂರು ಗುಂಡುಗಳು ತಗುಲಿವೆ ಎಂದು ತಿಳಿದುಬಂದಿದೆ. ಕೂಡಲೇ ದಹಿಸರ್‌ನ ಕರುಣಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ಘಟನೆಯ ವಿಡಿಯೋದಲ್ಲಿ, ಘೋಸಲ್ಕರ್ ಅವರು ಫೇಸ್‌ಬುಕ್ ಲೈವ್‌ನಲ್ಲಿ ನೊರೊನ್ಹಾ ಅವರೊಂದಿಗೆ ಕುಳಿತಿರುವುದನ್ನು ಕಾಣಬಹುದು. ಆದರೆ ಘಟನೆಗಳ ನಾಟಕೀಯ ತಿರುವಿನಲ್ಲಿ, ಕೆಲವೇ ಕ್ಷಣಗಳ ನಂತರ ನೊರೊನ್ಹಾ ಲೈವ್ ಸ್ಟ್ರೀಮಿಂಗ್ ಕೊನೆಗೊಳ್ಳುತ್ತಿದ್ದಂತೆ ಘೋಸಲ್ಕರ್ ಮೇಲೆ ಗುಂಡು ಹಾರಿಸಿದ್ದಾನೆ.
ಘೋಸಲ್ಕರ್ ಮೇಲೆ ಗುಂಡು ಹಾರಿಸಿದ ಬಳಿಕ ಮೌರಿಸ್ ನೊರೊನ್ಹಾ ಕೂಡ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅಭಿಷೇಕ್ ಘೋಸಲ್ಕರ್‌ಗೆ ಗುಂಡು ಹಾರಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.