
ಆಸ್ತಿ ವಿವಾದ: ತಂದೆ-ತಾಯಿಯನ್ನು ಹತ್ಯೆಗೈದ ಮಗ
ಬೆಂಗಳೂರು, ಡಿ 11 : ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ವೃದ್ಧ ಪೋಷಕರನ್ನು ಅವರ ನಿವಾಸದಲ್ಲಿಯೇ ಹೊಡೆದು ಕೊಂದಿದ್ದಕ್ಕಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ಹೊಸಕೋಟೆ ಸಮೀಪದ ಸೂಲಿಬೆಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಕೊಡಲು ನಿರ್ಧರಿಸಿದ್ದಕ್ಕೆ ಆರೋಪಿ ನರಸಿಂಹಮೂರ್ತಿ ಪೋಷಕರನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ರಾತ್ರಿ ತನ್ನ ತಂದೆ ರಾಮಕೃಷ್ಣಪ್ಪ (70) ಮತ್ತು ತಾಯಿ ಮುನಿರಾಮಕ್ಕ (65) ಎಂಬುವರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದರು. ಅವರನ್ನು ಕೊಂದ ಬಳಿಕ ಮನೆಯ ಬಾಗಿಲಿಗೆ ಹೊರಗಿನಿಂದ ಬೀಗ ಹಾಕಿಕೊಂಡು ತಾವೇನೂ ಮಾಡಿಲ್ಲ ಎಂಬಂತೆ ನಾಟಕವಾಡಿದ್ದ.
ಅಲ್ಲದೇ ವಿಚಾರಣೆ ನಡೆಸಿದಾಗ ಆರೋಪಿಗಳು ಪೊಲೀಸರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಆತನ ಹೇಳಿಕೆಯಿಂದ ಅನುಮಾನಗೊಂಡ ಪೊಲೀಸರು ಆತನೇ ಕೊಲೆಗಾರ ಎಂದು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ದಂಪತಿಗೆ ನಾಲ್ಕು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. ಎಲ್ಲಾ ಹೆಣ್ಣು ಮಕ್ಕಳು ಮದುವೆಯಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಹೆಣ್ಣುಮಕ್ಕಳು ಪ್ರತಿದಿನ ತಮ್ಮ ಪೋಷಕರಿಗೆ ಕರೆ ಮಾಡುತ್ತಿದ್ದು, ಭಾನುವಾರ ಅವರ ಕರೆಗಳಿಗೆ ಉತ್ತರಿಸದಿದ್ದಾಗ ಅವರಲ್ಲಿ ಒಬ್ಬರು ಸೋಮವಾರ ಸಂಜೆ ಮನೆಗೆ ಬಂದು ನೋಡಿದಾಗ ಆಕೆಯ ಪೋಷಕರು ಸಾವನ್ನಪ್ಪಿದ್ದಾರೆ.
ಪಾಲಕರು ಆಸ್ತಿಯನ್ನೆಲ್ಲ ತಮ್ಮ ಮಕ್ಕಳಿಗೆ ಬಿಟ್ಟುಕೊಟ್ಟು ಎರಡು ಎಕರೆಯನ್ನು ತಮಗಾಗಿಯೇ ಇಟ್ಟುಕೊಂಡಿದ್ದರು. ಇದನ್ನು ತಮ್ಮ ಮಕ್ಕಳಿಗೆ ಸಮಾನವಾಗಿ ಹಂಚಲು ನಿರ್ಧರಿಸಿದ್ದರು. ಕೊಲೆಯ ಹಿಂದೆ ತಮ್ಮ ಸಹೋದರನ ಪಾತ್ರವಿದೆ ಎಂದು ಹೆಣ್ಣುಮಕ್ಕಳು ಶಂಕಿಸಿದ್ದರು. ಬೆಂಗಳೂರಿನ ಹೊರವಲಯದಲ್ಲಿರುವ ಆಸ್ತಿ ಕೋಟ್ಯಂತರ ಮೌಲ್ಯದ್ದಾಗಿದ್ದು, ಇದಕ್ಕಾಗಿ ಮಗ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.




