ಬೆಂಗಳೂರು, 12: ವಿದ್ಯಾರ್ಥಿಗಳ ಕಲಿಕೆಯಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಕೆಗೆ ಉತ್ತೇಜನ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನ ನಿಮಿತ್ತ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ಜನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,150 ಕೋಟಿ ವೆಚ್ಚದಲ್ಲಿ ಟ್ಯಾಬ್ಲೆಟ್‍ಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದರು.
ರಾಜ್ಯದ ಕಾಲೇಜುಗಳ ಅಭಿವೃದ್ಧಿಗೆ 430 ಕೋಟಿ ನೀಡಲಾಗಿದೆ. ಹೆಣ್ಣು ಮಕ್ಕಳು ಕಾಲೇಜಿಗೆ ಸೇರ್ಪಡೆಯಾಗಲೂ ಸಂಪೂರ್ಣ ಉಚಿತ ದಾಖಲಾತಿ ಮಾಡಲಾಗಿದೆ ಎಂದರು.
ಯುವ ಜನರಿಗಾಗಿ ಯುವ ಸ್ಪಂದನ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದೆ. ವಿವೇಕಾನಂದರ ಆದರ್ಶಗಳನ್ನ ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿವೇಕಾನಂದರು ತತ್ವಜ್ಞಾನಿಯಾಗಿದ್ದರು. ಚಾರಿತ್ರ್ಯ ನಿರ್ಮಾಣದಿಂದ ದೇಶದ ನಿರ್ಮಾಣ ಸಾಧ್ಯ ಎಂದವರು ವಿವೇಕಾನಂದರು. ಯುವ ಜನತೆ ರಾಜ್ಯ, ದೇಶದ ಆಸ್ತಿ. ರಾಷ್ಟ್ರದ ನಿರ್ಮಾಣಕ್ಕೆ ಯುವ ಜನತೆಯನ್ನ ತೊಡಗಿಸಿಕೊಳ್ಳುವ ಕೆಲಸ ದೇಶದಲ್ಲಿ ನಡೆಯುತ್ತಿದೆ ಎಂದರು.
ದೇಶ ಮೊದಲ ಸ್ಥಾನಕ್ಕೆ ಬರಬೇಕಾದರೆ ವಿವೇಕಾನಂದ ಮಾರ್ಗ ಅನುಸರಿಸಬೇಕು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯದಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಸಿಎಂ ಹೇಳಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು. ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಆಯುಕ್ತ ಪ್ರದೀಪ್ ಇದ್ದರು.