
ರಾಯಚೂರು : ಸಿ ದರ್ಜೆಯ ದೇವಸ್ಥಾನಗಳ ಅಭಿವೃದ್ದಿಗೆ ಕ್ರಮ – ವೆಂಕಟೇಶ ಕುಮಾರ್
ರಾಯಚೂರು,ಡಿ.07:- ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೊಳಪಡುವ ಜಿಲ್ಲೆಯ ಸಿ ದರ್ಜೆಯ ದೇವಸ್ಥಾನಗಳ ಸರ್ವಾಂಗೀಣ ಅಭಿವೃದ್ದಿಗೆ ಗ್ರಾಮಲೆಕ್ಕಾಧಿಕಾರಿಗಳು ಉಸ್ತುವಾರಿ ವಹಿಸಲು ಸುತ್ತೋಲೆಯೊಂದನ್ನು ಹೊರಡಿಸುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರು ದತ್ತಿ ಇಲಾಖೆಯ ಸಹಾಯಕ ಸೆಲ್ವಮಣಿ ಅವರಿಗೆ ಸೂಚಿಸಿದರು.
ಅವರು ಡಿ.7ರ ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
1 ರಿಂದ 5 ಲಕ್ಷ ರೂ.ಗಳ ವರೆಗೆ ಆದಾಯಗಳಿಸುವ ದೇವಸ್ಥಾನಗಳನ್ನು ಸಿ ದರ್ಜೆ ವ್ಯಾಪ್ತಿಗೊಳಪಡಿಸಲಾಗಿದೆ, ಅಲ್ಲಿ ಸಂಗ್ರಹವಾಗುವ ಹಣವನ್ನು ನಿಯಮಿತವಾಗಿ ಸಂಬಂಧಿಸಿದ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು, ಪ್ರತಿ ದೇವಸ್ಥಾನಕ್ಕೂ ಕಾರ್ಯನಿರ್ವಾಹಕ ಅಧಿಕಾರಿ ಅಥವಾ ಸಿಬ್ಬಂದಿಯೊಬ್ಬರು ಇರಲೇಬೇಕು, ಅವರು ದೇವಸ್ಥಾನದ ಕಾರ್ಯನಿರ್ವಹಣೆ ಮಾಡಬೇಕು. ದೇವಸ್ಥಾನದ ಸಂಗ್ರಹವಾಗುವ ಹಣದ ಬಗ್ಗೆ ನಿಗಾವಹಿಸಬೇಕು ಹಾಗೂ ಪ್ರತಿವರ್ಷ ಆಯವ್ಯಯವನ್ನು ನಿರ್ವಹಿಸಬೇಕು, ದೇವಸ್ಥಾನದ ಆರ್ಚಕರ ಮಾಹಿತಿ ಸಂಗ್ರಹಿಸಬೇಕು ಎಲ್ಲ ದೇವಾಲಯಗಳಲ್ಲಿ ಹುಂಡಿ ಇರಲೇಬೇಕು ಹಾಗೂ ಅದಕ್ಕೆ ಕಡ್ಡಾಯವಾಗಿ ಬೀಗ ಹಾಕಬೇಕು. ಭಕ್ತಾದಿಗಳು ಹುಂಡಿಯಲ್ಲಿ ಹಣ ಹಾಕಬೇಕು ಎಂಬುದನ್ನು ಬರಹದ ಮೂಲಕ ಸೂಚಿಸಬೇಕು, ಅದರಂತೆ ಪ್ರತಿನಿತ್ಯ ದೇವಸ್ಥಾನದಲ್ಲಿ ಸಲ್ಲಿಸಲಾಗುವ ಸೇವೆಗಳ ಕುರಿತು ನಾಮಫಲಕದಲ್ಲಿ ಮಾಹಿತಿ ನೀಡಬೇಕು, ಇದನ್ನು ಸಂಬಂಧಿಸಿದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಗ್ರಾಮ ಲೆಕ್ಕಾಧಿಕಾರಿಗಳು ನಿಗಾವಹಿಸಬೇಕು ಎಂದವರು ಹೇಳಿದರು.
ಪಾರಂಪರಿಕವಾಗಿ ನಡೆದುಬಂದ ಧಾರ್ಮಿಕ ಆಚರಣೆಗಳನ್ನು ಶ್ರದ್ದಾ-ಭಕ್ತಿಯಿಂದ ಆಯಾ ದೇವಸ್ಥಾನಗಳಲ್ಲಿ ನಿರ್ವಹಿಸಬೇಕು, ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ಗಳು ಈ ದೇವಸ್ಥಾನಗಳನ್ನು ವರ್ಷಕ್ಕೊಮ್ಮೆ ಸ್ಪಚ್ಚ ಪಡಿಸಿಕೊಡಬೇಕು, ಆಯಾ ದೇವಸ್ಥಾನಗಳ ಹಿರಿಮೆ ಗರಿಮೆ ಹಾಗೂ ಇತಿಹಾಸವನ್ನು ತಿಳಿಸಿಕೊಡಬೇಕು, ಒಟ್ಟಾರೆ ಆ ದೇವಸ್ಥಾನಗಳು ಅಭಿವೃದ್ಧಿಯಾಗಬೇಕು, ಪ್ರತಿ ತಿಂಗಳಗೊಮ್ಮೆ ಗ್ರಾಮಲೆಕ್ಕಾಧಿಕಾರಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಕುರಿತು ಪರಿಶೀಲಿಸಿ ವರದಿ ನೀಡಬೇಕೆಂದು ಜಿಲ್ಲಾಧಿಕಾರಿಯವರು ಸೂಚಿಸಿದರು.
ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಪರಿಷತ್ತಿನ ಸದಸ್ಯರಾದ ಶಿವಯ್ಯ ಸ್ವಾಮಿ, ಮನೋಜ, ಪಂಪಣ್ಣ ಬೇರಿ, ಸುಧೀರ್ ದೇಶಪಾಂಡೆ, ವಸಂತ ಆದೋನಿ, ಅಮರೇಶಪ್ಪ ಗೌಡ ಉಪಸ್ಥಿತರಿದ್ದರು.




