‘ಇಂಡಿಯಾ’ ಒಕ್ಕೂಟಕ್ಕೆ ವಿದಾಯ ಹೇಳಲು RLD ಸಜ್ಜು!

ನವದೆಹಲಿ: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಮುನ್ನವೇ ಇಂಡಿಯಾ ಒಕ್ಕೂಟದಿಂದ ಒಂದೊಂದೇ ಪಕ್ಷಗಳು ಹೊರಬರುತ್ತಿವೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಪಂಜಾಬ್‌ನಲ್ಲಿ ಆಪ್‌ ಸ್ವತಂತ್ರವಾಗಿ ಸ್ಪರ್ಧಿಸಲು ತೀರ್ಮಾನ ತೆಗೆದುಕೊಂಡಿವೆ. ನಿತೀಶ್‌ ಕುಮಾರ್‌ ಅವರು ಈಗಾಗಲೇ ಬಿಜೆಪಿ ಮೈತ್ರಿ ಸೇರಿದ್ದಾರೆ. ಇದರ ಬೆನ್ನಲ್ಲೇ, ಇಂಡಿಯಾ ಒಕ್ಕೂಟದಿಂದ ಹೊರಬರಲು ರಾಷ್ಟ್ರೀಯ ಲೋಕದಳವೂ ಸಜ್ಜಾಗಿದೆ ಎಂದು ಹೇಳಲಾಗುತ್ತಿದೆ.

ಉತ್ತರ ಪ್ರದೇಶದ ಆರ್ ಎಲ್ ಡಿ ಮುಖಂಡ ಜಯಂತ್ ಚೌಧರಿ ಶೀಘ್ರದಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಬಹುದು ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಯು ಉತ್ತರ ಪ್ರದೇಶ ತಲುಪುವ ಮೊದಲು ರಾಷ್ಟ್ರೀಯ ಲೋಕದಳವು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ ಸೇರುವ ಸಾಧ್ಯತೆ ಇದೆ.

ಜಯಂತ್ ಅವರು ಬಿಜೆಪಿಯ ಕೆಲವು ಹಿರಿಯ ನಾಯಕರನ್ನು ಭೇಟಿಯಾಗಿದ್ದಾರೆ. ಅವರ ತಂದೆ ಅಜಿತ್ ಚೌಧರಿ ಅವರ ಜನ್ಮದಿನವಾದ ಫೆಬ್ರವರಿ 12ರಂದು ಬಿಜೆಪಿಯೊಂದಿಗಿನ ಮೈತ್ರಿಯ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಕಳೆದ ಜನವರಿಯಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಆರ್‌ಎಲ್‌ಡಿ ಮಧ್ಯೆ ಸೀಟು ಹಂಚಿಕೆ ಕುರಿತು ಮಾತುಕತೆ ನಡೆದಿತ್ತು. ಮೂಲಗಳ ಪ್ರಕಾರ, ಆರ್‌ಎಲ್‌ಡಿಗೆ ಲೋಕಸಭೆಯ ಏಳು ಕ್ಷೇತ್ರಗಳನ್ನು ಬಿಟ್ಟುಕೊಡಲು ಎಸ್‌ಪಿ ಒಪ್ಪಿಕೊಂಡಿತ್ತು ಎನ್ನಲಾಗಿದೆ.

ಆದರೆ, ಈಗ ಆರ್‌ಎಲ್‌ಡಿಯು ಇಂಡಿಯಾ ಒಕ್ಕೂಟ ತೊರೆಯಲು ಸಜ್ಜಾಗಿದ್ದು, ಶೀಘ್ರವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ. 4 ಲೋಕಸಭೆ ಮತ್ತು ಒಂದು ರಾಜ್ಯಸಭಾ ಸ್ಥಾನದ ಕುರಿತು ಬಿಜೆಪಿಯೊಂದಿಗೆ ಮಾತುಕತೆ ಅಂತಿಮಗೊಳಿಸಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿಯನ್ನು ಶತಾಯ ಗತಾಯ ಸೋಲಿಸಬೇಕು ಎಂಬ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿರುವ ಇಂಡಿಯಾ ಒಕ್ಕೂಟವು ಲೋಕಸಭೆ ಚುನಾವಣೆಯ ಮೊದಲೇ ಛಿದ್ರ ಛಿದ್ರವಾಗಿದೆ. ಟಿಎಂಸಿಯು ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದೆ. ಪಂಜಾಬ್‌ನಲ್ಲಿ ಆಪ್‌ ಕೂಡ ಮೈತ್ರಿ ಇಲ್ಲದೆಯೇ ಸ್ಪರ್ಧಿಸಲು ಮುಂದಾಗಿದೆ.

ಇದರ ಬೆನ್ನಲ್ಲೇ, ನಿತೀಶ್‌ ಕುಮಾರ್‌ ಅವರು ಕೂಡ ಮೈತ್ರಿಕೂಟಕ್ಕೆ ವಿದಾಯ ಹೇಳಿರುವುದು ಒಕ್ಕೂಟದ ಒಗ್ಗಟ್ಟಿಗೆ ಭಾರಿ ಪೆಟ್ಟು ಬಿದ್ದಂತಾಗಿದೆ. ಈಗ ಮತ್ತೊಂದು ಪಕ್ಷವು ಒಕ್ಕೂಟ ತೊರೆಯಲು ಸಿದ್ಧತೆ ನಡೆಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

Latest Indian news

Popular Stories