
ರಾಜ್ಯವನ್ನು ತಲ್ಲಣಗೊಳಿಸಿದ ಶಿವಮೊಗ್ಗ ಸ್ಫೋಟ
ಬೆಂಗಳೂರು,ಜ.22:- ಗುರುವಾರ ರಾತ್ರಿ ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದ ಕ್ರಷರ್‍ನಲ್ಲಿ ಸಂಭವಿಸಿದ ಭೀಕರ ಸ್ಫೋಟವು ದೇಶದ ಗಮನ ಸೆಳೆದಿದೆ. ರಾಜ್ಯ ನಾಯಕರಲ್ಲದೆ, ರಾಷ್ಟ್ರ ನಾಯಕರೂ ಈ ಸ್ಫೋಟ ಕುರಿತು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ, ಸಚಿವರು, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರೂ ಘಟನೆ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆ ಕುರಿತ ಚರ್ಚೆ ಮುನ್ನೆಲೆಗೆ ಬಂದಿದೆ. ಗಣಿಗಾರಿಕೆ ಅಕ್ರಮವೋ, ಸಕ್ರಮವೋ ಎನ್ನುವುದು ಬೇರೆ ಸಂಗತಿ. ಒಟ್ಟಾರೆ, ಈ ರೀತಿಯ ದುರಂತಗಳು ಸಂಭವಿಸಬಾರದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಹುಣಸೋಡು ಕಲ್ಲುಗಣಿ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಶಿವಮೊಗ್ಗ-ಹಾನಗಲ್ ರಾಜ್ಯ ಹೆದ್ದಾರಿಯ ಅಬ್ಬಲಗೆರೆ ಗ್ರಾಮದಲ್ಲಿನ ಕಲ್ಲು ಕ್ರಶರ್‍ನಲ್ಲಿ ದುರಂತ ಸಂಭವಿಸಿದೆ. ಕ್ರಶರ್‍ನಲ್ಲಿ 50 ಕ್ಕೂ ಅಧಿಕ ಜಿಲೆಟಿನ್ ಕಡ್ಡಿಗಳಿದ್ದವು ಎಂದು ಹೇಳಲಾಗಿದೆ.
ಸಚಿವ ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಹಲವು ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ದರು. ತಜ್ಞರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.




