
ಹೈದರ್ ನದಾಫ್ ಮೇಲೆ ಹಾಡುಹಗಲೇ ಶೂಟೌಟ್
ವಿಜಯಪುರ: ಯುವ ಧುರೀಣ ಹೈದರ್ ನದಾಫ್ ಮೇಲೆ ಗುಂಡಿನ ದಾಳಿ ನಡೆದ ಪರಿಣಾಮ ಹೈದರ್ ನದಾಫ್ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.

ಹಾಡುಹಗಲೇ ನಡೆದಿರುವ ಕೃತ್ಯ ಜನತೆಯಲ್ಲಿ ಬೆಚ್ಚಿಬೀಳಿಸಿದೆ.
ಚಾಂದಪೂರ ಕಾಲೋನಿ ಬಳಿ ಇರುವ ತನ್ನ ನಿವಾಸದ ಬಳಿ ಹೈದರ್ ಕಾರು ಅಡ್ಡಗಟ್ಟಿದ ಆಗಂತುಕರು ಗುಂಡಿನ ದಾಳಿ ನಡೆಸಿದ್ದಾರೆ, ಇದನ್ನು ತಪ್ಪಿಸಿಕೊಳ್ಳಲು ಓಡಿ ಹೋಗಿದ್ದಾರೆ, ಅವರನ್ನು ಬೆನ್ನಟ್ಟಿದ್ದ ದುಷ್ಕರ್ಮಿಗಳು ನಾಲ್ಕು ಸುತ್ತಿನ ಗುಂಡಿನ ಮಳೆಗೈದಿದ್ದಾರೆ ಎನ್ನಲಾಗಿದೆ. ಆತ್ಮರಕ್ಷಣೆಗೆ ಓಡುತ್ತಿದ್ದ ಸಂದರ್ಭದಲ್ಲಿ ಅಲ್ಲಿದ್ದ ಕಾರ್ ಮೇಲೆ ಬಿದ್ದು ಕಾರ್ ಗಾಜು ಸಹ ಪುಡಿಪುಡಿಯಾಗಿದೆ.
ಹೈದರ್ ನದಾಫ್ ಶವ ಪತ್ತೆಯಾದ ಸ್ಥಳದಲ್ಲಿ ಎರಡು ಗುಂಡುಗಳು ಪತ್ತೆಯಾಗಿವೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಎಚ್.ಡಿ. ಆನಂದಕುಮಾರ ಮೊದಲಾದವರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಮೊನ್ನೆ ನಡೆದ ಪಾಲಿಕೆ ಚುನಾವಣೆಯಲ್ಲಿ ಹೈದರ್ ನದಾಫ್ ವಾರ್ಡ್ ನಂ.೧೯ ರಿಂದ ತಮ್ಮ ಪತ್ನಿ ನಿಶಾತ್ ನದಾಫ್ ಅವರನ್ನು ಪಕ್ಷೇತರವಾಗಿ ಕಣಕ್ಕಿಳಿಸಿ ಗೆಲುವು ಸಾಧಿಸಿದ್ದರು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು.
ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ.




