ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ:ವೀರೇಂದ್ರ ಹೆಗ್ಗಡೆ, ಅವರ ಕುಟುಂಬದ ಸದಸ್ಯರ ವಿರುದ್ಧ ಹೇಳಿಕೆ ನೀಡದಂತೆ ಹೈಕೋರ್ಟ್ ಆದೇಶ

ಬೆಂಗಳೂರು: ‘ಸೌಜನ್ಯಾ ಕೊಲೆ ಪ್ರಕರಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಅವರ ಕುಟುಂಬದ ಸದಸ್ಯರು ಮತ್ತು ನ್ಯಾಯಾಂಗದ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶವನ್ನು ಮಹೇಶ್ ಶೆಟ್ಟಿ ತಿಮರೋಡಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಅಂತೆಯೇ, ಈ ನಿಟ್ಟಿನಲ್ಲಿ ಮಹೇಶ್‌ ಶೆಟ್ಟಿ ತಿಮರೋಡಿ ನ್ಯಾಯಾಲಯ ನೀಡಿರುವ ಪ್ರತಿಬಂಧಕ ಆದೇಶ ಉಲ್ಲಂಘಿಸದಂತೆ ನೋಡಿಕೊಳ್ಳಬೇಕು‘ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

ಈ ಕುರಿಂತೆ, ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ‘ಯ ಪ್ರಾದೇಶಿಕ ನಿರ್ದೇಶಕ ಶೀನಪ್ಪ ಮತ್ತು ನಂದೀಶ್‌ ಕುಮಾರ್ ಜೈನ್‌ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಉದಯ ಹೊಳ್ಳ ವಾದ ಮಂಡಿಸಿ, ‘2012ರಲ್ಲಿ ನಡೆದ ಕುಮಾರಿ ಸೌಜನ್ಯಾ ಮೇಲಿನ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಜಿರೆಯ ಮಹೇಶ್‌ ಶೆಟ್ಟಿ ಅಲಿಯಾಸ್‌ ರವಿ ಅಲಿಯಾಸ್‌ ಮಹೇಶ್‌ ತಿಮರೋಡಿ ಮತ್ತು ಆತನ ಅನುಯಾಯಿಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯ ಮತ್ತು ದೇವಸ್ಥಾನಕ್ಕೆ ಸೇರಿದ ಸಂಸ್ಥೆಗಳು, ಟ್ರಸ್ಟ್‌ ವಿರುದ್ಧ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ನ್ಯಾಯಾಂಗ ಮತ್ತು ನ್ಯಾಯಾಧೀಶರ ವಿರುದ್ಧ ನಿಂದನಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪೊಲೀಸ್‌ ಇಲಾಖೆಯ ಬಗ್ಗೆಯೂ ಸಾರ್ವಜನಿಕವಾಗಿ ಅವಹೇಳನಕಾರಿಯಾಗಿ ಯೂ–ಟ್ಯೂಬ್ ಚಾನೆಲ್‌ಗಳು, ಮುದ್ರಣ ಮಾಧ್ಯಮ ಮತ್ತು ಟಿ.ವಿ.ಚಾನೆಲ್‌ಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದಾರೆ‘ ಎಂದು ದೂರಿದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ತನಿಖೆಯನ್ನಾದರೂ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಂಬಂಧಿಸಿದ ಪೊಲೀಸ್‌ ಇಲಾಖೆಗೆ 2023ರ ಆಗಸ್ಟ್‌ 5ರಂದೇ ಮನವಿ ನೀಡಲಾಗಿದೆ. ಹೀಗಾಗಿ, ನ್ಯಾಯಾಂಗ ಮತ್ತು ಧರ್ಮಸ್ಥಳದ ಮಂಜುನಾಥ ದೇವಾಲಯದ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡುತ್ತಿರುವ ಮಹೇಶ್ ತಿಮರೋಡಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕು‘ ಎಂದು ಕೋರಿದರು.

ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಮಹೇಶ್‌ ತಿಮರೋಡಿ ಸೇರಿದಂತೆ ಒಟ್ಟು ಒಂಬತ್ತು ಜನ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು. ಹೈಕೋರ್ಟ್‌ ವಕೀಲ ರಾಜಶೇಖರ ಎಸ್‌.ಹಿಲ್ಯಾರು ಅರ್ಜಿದಾರರ ಪರ ವಕಾಲತ್ತು ವಹಿಸಿದ್ದಾರೆ.

Latest Indian news

Popular Stories