ಟಿಕೆಟ್ ಮಾರಾಟ ಅಪವಾದಕ್ಕೆ ಗುರಿಯಾದ ಸಂಸದ
ಬೀದರ್: ಬಸವಕಲ್ಯಾಣ ಬಿಜೆಪಿ ಟಿಕೆಟ್ ಮಾರಾಟವಾಗಿದೆ, ಸಂಸದ ಭಗವಂತ ಖೂಬಾ ಟಿಕೆಟ್ ಮಾರಾಟ ಮಾಡಿದ್ದಾರೆ ಎಂಬೆಲ್ಲ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಟಿಕೆಟ್ ಮಾರಾಟದ ವಿಷಯ ಚರ್ಚೆಗೆ ಬಂದಿದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪದ ನಂತರ. ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬರು ಆ ಪಕ್ಷದ ನಾಯಕರಿಗೆ ದೊಡ್ಡ ಮೊತ್ತ ನೀಡಿರುವ ಮಾಹಿತಿ ಇದೆ ಎಂದಿದ್ದರು. ಇದಾದ ನಂತರವೇ ಈ ವಿಷಯ ಮಹತ್ವ ಪಡೆಯಿತು.
ನಿಜಕ್ಕೂ ಬಿಜೆಪಿಯವರು ಟಿಕೆಟ್ ಮಾರಾಟ ಮಾಡುತ್ತಾರೆಯೇ ?, ಸಂಸದ ಭಗವಂತ ಖೂಬಾ ಅವರು ತಾವು ಇಷ್ಟಪಟ್ಟ ಅಭ್ಯರ್ಥಿಗೆ ಟಿಕೆಟ್ ಕೊಡಿಸುವಷ್ಟು ಬಲಾಢ್ಯರೆ ಎಂಬ ಪ್ರಶ್ನೆಗಳು ಕಾರ್ಯಕರ್ತರನ್ನು ಕಾಡುತ್ತಿವೆ.
ಚುನಾವಣಾ ಉಸ್ತುವಾರಿಗಳಲ್ಲಿ ಒಬ್ಬರಾಗಿರುವ ಸಂಸದ ಭಗವಂತ ಖೂಬಾ ಅವರು ಪ್ರಭಾವಿ ಆಗಿರಬಹುದು. ಜೊತೆಗೆ ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಅವರೊಂದಿಗೆ ಆಪ್ತ ಸಂಬAಧ ಇದ್ದಿದ್ದರಿಂದ ಮಾತೂ ನಡೆಯಬಹುದು. ಆದರೆ, ಟಿಕೆಟ್ ಕೊಡಿಸಲು ಇದಿಷ್ಟೇ ಸಾಕೇ ಎನ್ನುವದು ಸದ್ಯದ ಪ್ರಶ್ನೆ.
ಮುಖಂಡ ಶರಣು ಸಲಗರ್ ಅವರಿಗೆ ಟಿಕೆಟ್ ಹೇಗೆ ಸಿಕ್ಕಿರಬಹುದು, ಅಥವಾ ಅದಕ್ಕವರು ಎಷ್ಟರಮಟ್ಟಿಗೆ ಅರ್ಹರು ಎನ್ನುವುದು ಬೇರೆ ಸಂಗತಿ. ಹಣ ನೀಡಿ ಬಿಜೆಪಿ ಟಿಕೆಟ್ ಪಡೆದುಕೊಳ್ಳಬಹುದೇ ಎನ್ನುವುದು ಸದ್ಯ ಮಹತ್ವ ಪಡೆದುಕೊಂಡಿದೆ.
ದೀರ್ಘಕಾಲ ಬಿಜೆಪಿಯಲ್ಲಿ ಇರುವ ಹಿರಿಯ ಮುಖಂಡರೊಬ್ಬರ ಪ್ರಕಾರ ಇಂತಹ ಘಟನೆ ನಡೆಯುವುದು ಸಾಧ್ಯವೇ ಇಲ್ಲ. ಸಂಸದರು ಶರಣು ಸಲಗರ್ ಪರವಾಗಿ ಮಾತಾಡಿರಹುದು. ಆದರೆ, ಹಣದ ವ್ಯವಹಾರ ನಡೆಯಲು ಅವಕಾಶ ನೀಡುವಷ್ಟು ದುರ್ಬಲ ನಾಯಕತ್ವ ಬಿಜೆಪಿಯಲ್ಲಿ ಇಲ್ಲ ಎನ್ನುತ್ತಾರೆ, ಅವರು.
ಇದೆಲ್ಲ ಟಿಕೆಟ್ ವಂಚಿತರು ನಡೆಸುತ್ತಿರುವ ಅಪಪ್ರಚಾರ. ಇದರಿಂದ ಯಾವ ಪರಿಣಾಮವೂ ಆಗುವುದಿಲ್ಲ ಎನ್ನುತ್ತಾರೆ, ಹಿರಿಯ ಮುಖಂಡರೊಬ್ಬರು.




