ಉಡುಪಿ: ಕೊನೆಗೂ ಮಗನ ಸೇರಿದ ತಾಯಿ


ಉಡುಪಿ ಅ.1: ಕಳೆದ 20 ದಿನಗಳ ಹಿಂದೆ ಉಡುಪಿಯಲ್ಲಿ ರಾತ್ರಿ ಹೊತ್ತು ಮಾನಸಿಕ ಅಸ್ವಸ್ಥರಾಗಿದ್ದ ಮಹಿಳೆಯನ್ನು ಸಮಾಜಸೇವಕ ವಿಶು ಶೆಟ್ಟಿಯವರು ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿ ತದನಂತರ “ಸಖಿ” ಕೇಂದ್ರಕ್ಕೆ ದಾಖಲಿಸಿ ಇದೀಗ “ಸಖಿ” ಕೇಂದ್ರದ ನೆರವಿನಿಂದ ಮಗನಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಮಹಿಳೆ ಕಮಲಮ್ಮ (50) ಮೂಲತಃ ಹುಬ್ಬಳ್ಳಿಯವರಾಗಿದ್ದು ಕೆಲವು ದಿನಗಳಿಂದ ಉಡುಪಿ ನಗರದಲ್ಲಿ ಸುತ್ತಾಡಿಕೊಂಡು ಅಸಹಾಯಕರಾಗಿ ಮಾನಸಿಕ ಖಿನ್ನತೆಗೊಳಗಾಗಿದ್ದರು. ರಾತ್ರಿ ಹೊತ್ತು ರಸ್ತೆ ಬದಿ ದುಃಖದಿಂದ ಇದ್ದ ಇವರನ್ನು ವಿಶು ಶೆಟ್ಟಿಯವರು ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದರು.

15 ದಿನಗಳ ಚಿಕಿತ್ಸೆಗೆ ಸ್ಪಂದಿಸಿದ ಮಹಿಳೆಯನ್ನು ವಿಶು ಶೆಟ್ಟಿಯವರು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಕುಟುಂಬಿಕರ ಪತ್ತೆಯಾಗದ ಹಿನ್ನೆಲೆಯಲ್ಲಿ “ಸಖಿ” ಕೇಂದ್ರಕ್ಕೆ ದಾಖಲಿಸಿದ್ದರು. ಮಹಿಳೆ ನೀಡಿದ ಮಾಹಿತಿ ಮೇರೆಗೆ ಮನೆಯವರ ಪತ್ತೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಬಿತ್ತರಿಸಲಾಗಿತ್ತು. “ಸಖಿ “ಕೇಂದ್ರದ ಸಿಬ್ಬಂದಿಗಳು ಮಹಿಳೆ ನೀಡಿದ ಮಾಹಿತಿಯ ಅನುಸಾರ ಹುಬ್ಬಳ್ಳಿ ಧಾರವಾಡದಲ್ಲಿ ಮನೆಯವರ ಪತ್ತೆಗಾಗಿ ಪ್ರಯತ್ನಿಸಿ ಕುಟುಂಬಿಕರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು.

ಇದೀಗ ಮಹಿಳೆಯ ಮಗ ಹುಬ್ಬಳ್ಳಿಯಿಂದ ಉಡುಪಿಗೆ ಬಂದು ಮಹಿಳೆಯನ್ನು ವಶಕ್ಕೆ ಪಡೆದು ಊರಿಗೆ ಕರೆದುಕೊಂಡು ಹೋಗಿರುತ್ತಾರೆ. ಆಸ್ಪತ್ರೆಯ ಚಿಕಿತ್ಸಾ ವೆಚ್ಚ ವಿಶು ಶೆಟ್ಟಿ ಭರಿಸಿದ್ದಾರೆ. ಮಹಿಳೆ ಮನೆ ಬಿಟ್ಟು ಎರಡು ತಿಂಗಳಾಗಿದ್ದು ಕುಟುಂಬಸ್ಥರು ತುಂಬಾ ಹುಡುಕಾಟ ನಡೆಸಿದ್ದು, ಇದೀಗ ತಾಯಿಯನ್ನು ಕಂಡು ಸಂತೋಷದಿಂದ ನೆಮ್ಮದಿಯ ಉಸಿರು ಬಿಟ್ಟಿದ್ದಾರೆ.

Latest Indian news

Popular Stories