ಬಂಟ್ವಾಳ, ಜು.14: ತಾಲೂಕಿನ ವಿಟ್ಲ ಸಮೀಪದ ಪರಿಯಾಲತಡ್ಕ-ಸರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಶುಕ್ರವಾರ ಚಾಲಕನ ನಿಯಂತ್ರಣ ತಪ್ಪಿ ಪಿಕ್‌ಅಪ್ ವಾಹನವೊಂದು ರಸ್ತೆ ಬದಿಯ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯೊಳಗೆ ಮಲಗಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಕೂರೇಲು ಮದ್ಯದಂಗಡಿ ಬಳಿಯ ರಸ್ತೆಯ ಕೆಳಗಡೆ ಇರುವ ಮನೆ ಸಂಪೂರ್ಣ ಜಖಂಗೊಂಡಿದೆ. ಮಹಿಳೆಯೊಬ್ಬರು ಮನೆಯೊಳಗೆ ಮಲಗಿದ್ದ ವೇಳೆ ಅವರ ಮೇಲೆ ವಾಹನ ಬಿದ್ದಿದೆ ಎನ್ನಲಾಗಿದೆ. ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಮಹಿಳೆ ಮನೆಯೊಳಗೆ ಸಿಲುಕಿಕೊಂಡಿದ್ದು, ಆಕೆಯನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ. ವಿಟ್ಲ ಪೊಲೀಸರು, ತುರ್ತು ಸೇವಾ ವಾಹನಗಳು ಮತ್ತು ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದು, ಗಾಯಗೊಂಡ ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಸ್ಥಳಕ್ಕೆ ಕ್ರೇನ್ ಕೂಡ ಕರೆಸಲಾಗಿದೆ.