ವಿಕಲಚೇತನರಿಗಿಂತ ಹೆಚ್ಚಾಗಿ ಸಭ್ಯ ಸಮಾಜಕ್ಕೆ ಸುಲಭಲಭ್ಯತೆಯ ಕುರಿತು ಬೋಧಿಸಬೇಕಾದ ಅಗತ್ಯತೆ ಇದೆ: ಸಿ.ಎಸ್ ದ್ವಾರಕಾನಾಥ್

‘ಸೇ ಎಸ್ ಟು ಆಕ್ಸೆಸ್’ ಅಭಿಯಾನದ ಪೋಸ್ಟರ್ ಬಿಡುಗಡೆ

‘ಎಪಿಡಿ’ಯಿಂದ ಮೂರು ದಿನಗಳ ರಾಜ್ಯಮಟ್ಟದ ಆಕ್ಸೆಸಿಬಿಲಿಟಿ ಕಾರ್ಯಾಗಾರಕ್ಕೆ ಚಾಲನೆ

ಬೆಂಗಳೂರು: ವಿಕಲಚೇತನರ ಊನತೆಗಳನ್ನೇ ಕುಂಟ, ಕುರುಡ ಎಂದು ಬೈಗುಳಗಳನ್ನಾಗಿ ಪರಿವರ್ತಿಸಿಕೊಂಡಿರುವ ಸಭ್ಯ ಸಮಾಜಕ್ಕೆ ಇವತ್ತು ಸುಲಭ ಲಭ್ಯತೆಯ ಕುರಿತು ತಿಳಿ ಹೇಳಬೇಕಾದ ಅಗತ್ಯತೆ ಇದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಡಾ‌‌. ಸಿ.ಎಸ್. ದ್ವಾರಕಾನಾಥ್‌ರವರು ಹೇಳಿದರು.

IMG 20230714 WA0009 State News

ಅವರು ಬೆಂಗಳೂರಿನ ಪಾಲನಾ ಭವನದಲ್ಲಿ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ವತಿಯಿಂದ ಆಯೋಜಿಸಲಾಗಿದ್ದ ಸುಲಭಲಭ್ಯತೆ ಕುರಿತ ರಾಜ್ಯಮಟ್ಟದ ಕಾರ್ಯಾಗಾರ ವನ್ನು ಉದ್ಘಾಟಿಸಿ ಮಾತನಾಡಿದರು.

ಕಾಯಕ ಯೋಗಿ ಬಸವಣ್ಣನವರ ತತ್ವಗಳನ್ನು ನೆನೆದ ಅವರು, ವಿಕಲಚೇತನರಿಗೆ ಪ್ರೀತಿ, ಕಾಳಜಿ ಬೇಕಿದೆಯೇ ವಿನಃ ಕರುಣೆ, ದಯೆ ಬೇಕಾಗಿಲ್ಲ ಎಂದು ಸಮಾಜಕ್ಕೆ ಕರೆ ನೀಡಿದರು.

ಕಾರ್ಯಾಗಾರದಲ್ಲಿ ಸುಲಭ ಲಭ್ಯತೆಯ ಕುರಿತು ಮಾಹಿತಿ ನೀಡಲು ಆರಂಭಿಸಲಾದ ‘ಸೇ ಎಸ್ ಟು ಆಕ್ಸೆಸ್’ ಅಭಿಯಾನದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ವಿಕಲಚೇತನರ ಆಯೋಗದ ರಾಜ್ಯ ಆಯುಕ್ತರಾದ ಶ್ರೀಮತಿ ಲತಾ ಕುಮಾರಿ ಮಾತನಾಡಿ, “ಎಪಿಡಿ ಸಂಸ್ಥೆ ನೀಡುತ್ತಿರುವ ತರಬೇತಿ ಕಾರ್ಯಾಗಾರಗಳು ರಾಜ್ಯಾದ್ಯಂತ ಪಸರಿಸಬೇಕಿದೆ. ಪ್ರತಿಯೊಬ್ಬ ಮನುಷ್ಯನಿಗೂ ನ್ಯೂನತೆಗಳಿವೆ. ಅವುಗಳನ್ನು ಮೀರಿ ಸಮಾಜದಲ್ಲಿ ಬೆಳೆಯಬೇಕಿದ್ದು, ಘನತೆಯ ಬದುಕನ್ನು ಕಟ್ಟಿಕೊಳ್ಳಲು ಪ್ರತಿಯೊಬ್ಬರು ಆರ್ಥಿಕವಾಗಿ ಬಲಿಷ್ಠವಾಗಬೇಕಿದೆ. ಉದ್ಯೋಗ ಇವತ್ತು ಪುರುಷ ಲಕ್ಷಣ ಎನ್ನುವುದಕ್ಕಿಂತ ಸ್ತ್ರೀ ಪುರುಷರಿಬ್ಬರ ಲಕ್ಷಣವೆಂದು ಬದಲಾಯಿಸಿಕೊಳ್ಳಬೇಕಿದೆ‌ ಎಂದರು‌.

ಇದೇ ವೇಳೆ ಮಾತನಾಡಿದ ಎಪಿಡಿಯ ಗೌರವಾನ್ವಿತ ಕಾರ್ಯದರ್ಶಿ ಜೇಕಬ್ ಕುರಿಯನ್‌, ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ(ಎಪಿಡಿ) ಸುಮಾರು 64 ವರ್ಷಗಳಿಂದ ವಿಕಲಚೇತನರ,ದುರ್ಬಲರ ಸಬಲೀಕರಣಕ್ಕಾಗಿ ಸೇವೆ ಸಲ್ಲಿಸುತ್ತಾ ಬಂದಿದೆ. ಸಮಾಜದಲ್ಲಿ ಅಂಗವೈಕಲ್ಯತೆಯ ಕುರಿತು ತಪ್ಪು ಅಭಿಪ್ರಾಯ ಇರುವುದನ್ನು ಗುರುತಿಸಿದೆ. ಇಂದು ಸುಲಭಲಭ್ಯತೆಯ ಅಗತ್ಯತೆ ಕೇವಲ ವಿಕಲಚೇತರಿಗೆ ಮಾತ್ರ ಇದೆ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿದೆ. ಈ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಬೇಕಾದ ಅನಿವಾರ್ಯತೆ ಈಗಿನ ಸಮಾಜದಲ್ಲಿ ಎದ್ದು ಕಾಣುತ್ತಿದೆ ಎಂದರು.

ಇಂದು ಮಕ್ಕಳು, ಗರ್ಭಿಣಿ ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಕಾಯಿಲೆ ಪೀಡಿತರಿಗೂ ಆಕ್ಸೆಸಿಬಿಲಿಟಿ ಅಗತ್ಯತೆ ಇದೆ ಎಂಬುದನ್ನು ಮನಗಾಣಬೇಕಿದೆ‌. ಸುಲಭಲಭ್ಯತೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿರುವುದರಿಂದಲೇ ವಿದೇಶಗಳಲ್ಲಿ ವಿಕಲಚೇತನರು, ಹಿರಿಯ ನಾಗರಿಕರು ಮಾಲ್, ಸಿನೆಮಾ ಥಿಯೇಟರ್, ಕಂಪೆನಿಗಳು ಸೇರಿದಂತೆ ಔದ್ಯೋಗಿಕ ರಂಗದಲ್ಲಿ ಲವಲವಿಕೆಯಿಂದ ಓಡಾಡುತ್ತಿದ್ದಾರೆ. ವಿಪರ್ಯಾಸವೆಂದರೆ ಭಾರತದಲ್ಲಿ ಸಾರಿಗೆ, ಉದ್ಯೋಗ,ಉದ್ಯಮ ಹಾಗೂ ವಿಹಾರ ಕೇಂದ್ರಗಳಲ್ಲಿಯೂ ವಿಕಲಚೇತನರು, ಗರ್ಭಿಣಿಯರು ಹಾಗೂ ಹಿರಿಯ ನಾಗರಿಕರು ಸಮಸ್ಯೆಗಳನ್ನು ಎದುರಿಸಬೇಕಾಗಿದ್ದು, ಹೆಚ್ಚಿನವರು ಮನೆಗಳಲ್ಲಿಯೇ ಉಳಿದುಕೊಳ್ಳಲು ಬಯಸುತ್ತಾರೆ. ಈ ಪರಿಸ್ಥಿತಿಯಲ್ಲಿ ಬದಲಾವಣೆ ಕಂಡು ಬರಬೇಕಿದ್ದಲ್ಲಿ ಪೂರಕವಾದ ಸುಲಭ ಲಭ್ಯತೆ ಸೌಕರ್ಯಗಳನ್ನು ಒದಗಿಸಲು ಸಮಾಜದಲ್ಲಿ ಕೈಜೋಡಿಸಬೇಕಿದ್ದು ಆಗ ಮಾತ್ರ ಕರ್ನಾಟಕವನ್ನು ಅಸ್ಸೆಸೆಬಿಲಿಟಿಯಲ್ಲಿ ಮಾದರಿ ರಾಜ್ಯವನ್ನಾಗಿ ಮಾಡಲು ಸಾಧ್ಯ ಎಂದರು.

ಕಾರ್ಯಾಗಾರದಲ್ಲಿ 15ಕ್ಕೂ ಹೆಚ್ಚು ಜಿಲ್ಲೆಗಳಿಂದ ಅಭ್ಯರ್ಥಿಗಳು ಭಾಗವಹಿಸಿದ್ದು, ಮೂರುದಿನಗಳ ಕಾಲ ಆಕ್ಸೆಸಿಬಿಲಿಟಿ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಸುಲಭ ಲಭ್ಯತೆ’ ಎಂದರೇನು?

ಸುಲಭಲಭ್ಯತೆ ಅಥವಾ ಆಕ್ಸೆಸಿಬಿಲಿಟಿ ಎಂದರೆ ವಿಕಲಚೇತನರು, ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರು ಸೇರಿದಂತೆ ಇತರ ಜನರಿಗೆ ಸಾರಿಗೆ, ಉದ್ಯೋಗ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಪೂರಕವಾದ ವಾತಾವರಣವನ್ನು ಕಲ್ಪಿಸುವುದಾಗಿದೆ. ಇನ್ನೊಂದು ಅರ್ಥದಲ್ಲಿ ವಿಕಲಚೇತನರಿಗೆ ಸುಲಭವಾಗಿ ಬಳಸಲು ಸಾಧ್ಯವಾಗುವ ಹಾಗೆ ಉತ್ಪನ್ನಗಳು, ಸಾಧನಗಳು, ಸೇವೆಗಳು, ವಾಹನಗಳು ಅಥವಾ ಪರಿಸರವನ್ನು ವಿನ್ಯಾಸಗೊಳಿಸುವುದಾಗಿದೆ. ವ್ಹೀಲ್ ಚೇರ್, ವಾಕರ್, ಭೂತಗನ್ನಡಿ, ರ‌್ಯಾಂಪ್ ರೈಲಿಂಗ್, ಲಿಫ್ಟ್, ವಿಕಲಚೇತನರು ಬಳಸಬಹುದಾದ ಶೌಚಾಲಯಗಳು, ರಸ್ತೆಯಲ್ಲಿ ಇಳಿಜಾರು ವ್ಯವಸ್ಥೆಗಳು, ಸಾರಿಗೆಗಳಲ್ಲಿ ಹತ್ತಲು ಬೇಕಾಗುವ ರ‌್ಯಾಂಪ್‌ಗಳ ವ್ಯವಸ್ಥೆ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸುವುದಾಗಿದೆ.

ವಿಕಲಚೇತನರಿಗಾಗಿ ವಿಶಿಷ್ಟ ಆ್ಯಪ್

ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಸುಲಭಲಭ್ಯತೆಗಳಾದ ರ‌್ಯಾಂಪ್ ರೈಲಿಂಗ್, ವ್ಹೀಲ್ ಚೇರ್, ಲಿಫ್ಟ್ ಸೇರಿದಂತೆ ಇತರೆ ಸೌಲಭ್ಯಗಳ ಕುರಿತು ಮಾಹಿತಿ ನೀಡಲು ವಿಕಲಚೇತನರಿಗೆ ಬಳಸಲು ಸುಲಭವಾಗುವಂತಹ ಅಪ್ಲೀಕೇಶನ್ ನಿರ್ಮಿಸುತ್ತಿರುವ ಕುರಿತು ಜೇಕಬ್ ಕುರಿಯನ್ ಮಾಹಿತಿ ನೀಡಿದರು.

ಕಾರ್ಯಾಗಾರದ ಆರಂಭದಲ್ಲಿ ಎಪಿಡಿ ಸಿಬ್ಬಂದಿ ಮುನಿ ಚೌಡಪ್ಪರವರು ಸ್ವಾಭಿಮಾನ ಗೀತೆಯನ್ನು ಹಾಡಿದರು. ಎಪಿಡಿ ನಿರ್ದೇಶಕರಾದ ಶಿವ. ಸಿ. ಹಿರೇಮಠ್‌ರವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು‌. ಉಪ ನಿರ್ದೇಶಕರಾದ ಎಸ್. ಬಾಬು‌ರವರು ಕಾರ್ಯಾಗಾರದ ಉದ್ದೇಶ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ವಿಷಯಗಳ ಕುರಿತು ಮಾಹಿತಿ ನೀಡಿದರು. ಶಿವಪ್ಪ. ಬಿ. ಎನ್ ಧನ್ಯವಾದವಿತ್ತರು.

Latest Indian news

Popular Stories