ಮಂಗಳೂರು, ಆ.10: ಕಿನ್ನಿಗೋಳಿ-ಮೂಡುಬಿದಿರೆ ರಾಜ್ಯ ಹೆದ್ದಾರಿಯ ಮೂರುಕಾವೇರಿ ಎಂಬಲ್ಲಿ ಬುಧವಾರ ಸಂಜೆ ಟಿಪ್ಪರ್ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡು, ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮೃತರನ್ನು ಬೆಳುವಾಯಿ ನಿವಾಸಿ ರಾಮಣ್ಣ (49) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇತರ ಪ್ರಯಾಣಿಕರು ವಸಂತ್, ಪ್ರವೀಣ್, ದಿನೇಶ್, ಆನಂದ ಮತ್ತು ಸಂಜೀವ. ಇವರಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕಾರು ಐಕಳದಿಂದ ಮೂಲ್ಕಿ ಕಡೆಗೆ ತೆರಳುತ್ತಿದ್ದು, ಟಿಪ್ಪರ್ ಮುಲ್ಕಿಯಿಂದ ಬೆಳುವಾಯಿ ಕಡೆಗೆ ಬರುತ್ತಿತ್ತು. ಕಾರು ಚಾಲಕನ ನಿಯಂತ್ರಣ ತಪ್ಪಿ ಡಾಂಬರೀಕರಣದ ರಸ್ತೆ ದಾಟಿದೆ. ಮತ್ತೆ ರಸ್ತೆಯಲ್ಲಿ ಬರುತ್ತಿದ್ದಂತೆ ಟಿಪ್ಪರ್ ಡಿಕ್ಕಿ ಹೊಡೆದಿದೆ. ಟಿಪ್ಪರ್ ಲಾರಿ ಚಾಲಕ ಕಾರನ್ನು ತಪ್ಪಿಸಲು ಪ್ರಯತ್ನಿಸಿದರೂ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಒಂದು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ರಾಮಣ್ಣ ಮತ್ತು ಇತರ ಐವರು ಮುಲ್ಕಿಯ ಕಾರ್ನಾಡ್‌ನಲ್ಲಿರುವ ತಮ್ಮ ಹಳೆಯ ಮನೆಯನ್ನು ಕೆಡವಿ ಬೆಳುವಾಯಿಯ ಮನೆಗೆ ಮರಳುತ್ತಿದ್ದರು.
ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಾಗ, ಆಂಬುಲೆನ್ಸ್ ರೈಲ್ವೆ ಕ್ರಾಸಿಂಗ್‌ನಲ್ಲಿ 20 ನಿಮಿಷಗಳ ಕಾಲ ಕಾಯಬೇಕಾಯಿತು. ತುರ್ತು ವಾಹನಗಳು ಸಂಚರಿಸಲು ಕ್ರಾಸಿಂಗ್‌ನಲ್ಲಿ ಫ್ಲೈ ಓವರ್ ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.